ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಸಿಇಒ(CEO) ಮತ್ತು ಎಂಡಿ(MD) ಆಗಿ ಕಾರ್ಯನಿರ್ವಹಿಸುತ್ತಿದ್ದ ಚಿತ್ರಾ ರಾಮಕೃಷ್ಣ(Chitra Ramakrishna) ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ಸಿಬಿಐ(CBI) ನ್ಯಾಯಾಲಯವು ಶನಿವಾರ ವಜಾಗೊಳಿಸುವ ಮೂಲಕ ತಿರಸ್ಕರಿಸಿದೆ. ಬಂಧನದಿಂದ ಮುಕ್ತಿ ಕೋರಿ ಚಿತ್ರಾ ರಾಮಕೃಷ್ಣ ವಕೀಲರ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದರು. ಆಕೆಯ ಮನವಿಯನ್ನು ಪ್ರಾಸಿಕ್ಯೂಷನ್ ವಿರೋಧಿಸಿದೆ. ಪ್ರತಿವಾದ ಮತ್ತು ಪ್ರಾಸಿಕ್ಯೂಷನ್ ವಾದವನ್ನು ಆಲಿಸಿದ ನಂತರ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.

ಫೆಬ್ರವರಿ 24 ರಂದು ಸಿಬಿಐ ಎನ್‌ಎಸ್‌ಇಯ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರನ್ನು ಬಂಧಿಸಿತ್ತು. ನಂತರ ಅವರನ್ನು ಮಾರ್ಚ್ 6 ರವರೆಗೆ ಸಿಬಿಐ ತನಿಖೆಗೆ ಒಳಪಡಿಸಿಲಾಗಿತ್ತು. ಎನ್‌ಎಸ್‌ಇ ವಂಚನೆ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ನಿಗೂಢ ಹಿಮಾಲಯನ್ ಯೋಗಿಯನ್ನು ತಲುಪಲು ಹೊಸ ಸುಳಿವುಗಳನ್ನು ಹುಡುಕುವ ಪ್ರಯತ್ನಗಳನ್ನು ಮಾಡುತ್ತಿದೆ. ಕಣ್ಣಿಗೆ ಕಾಣದ ನಿಗೂಢ ಯೋಗಿಯೊಂದಿಗೆ ರಹಸ್ಯ ಮಾಹಿತಿಗಳನ್ನು ಚಿತ್ರಾ ರಾಮಕೃಷ್ಣ ಹಂಚಿಕೊಂಡಿದ್ದಾರೆ.

ಆ ನಿಗೂಢ ಯೋಗಿ ಸುಬ್ರಮಣಿಯನ್ ಇರಬೇಕು ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಅರ್ನ್ಸ್ಟ್ ಅಂಡ್ ಯಂಗ್ (ಇ & ವೈ) ಫೊರೆನ್ಸಿಕ್ ವರದಿಯಲ್ಲಿ ಇದು ಉಲ್ಲೇಖವಾಗಿದೆ. ಫೆಬ್ರವರಿ 11ರಂದು ಸೆಬಿ ಅದನ್ನು ನಿರಾಕರಿಸಿತ್ತು. ಸುಬ್ರಮಣಿಯನ್ ಅವರ ವಿಚಾರಣೆಯೊಂದಿಗೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಿಬಿಐ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದು ಮೇ 2018 ರಿಂದ ಈ ವಿಷಯವನ್ನು ತನಿಖೆ ಮಾಡುತ್ತಿದೆ. ಆದರೆ ಈ ನಿಗೂಢ ಹಿಮಾಲಯನ್ ಯೋಗಿಯನ್ನು ಗುರುತಿಸಲು ಯಾವುದೇ ಸಂಕ್ಷಿಪ್ತ ಪುರಾವೆಗಳನ್ನು ಸಿಗುತ್ತಿಲ್ಲ!

ಇತ್ತೀಚೆಗೆ, ಚಿತ್ರಾ ರಾಮಕೃಷ್ಣ ಯೋಗಿಯೊಂದಿಗೆ ಎನ್‌ಎಸ್‌ಇ ಕುರಿತು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಕಂಡುಹಿಡಿದ ನಂತರ ಸೆಬಿ ಅವರಿಗೆ 3 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂಬದು ವರದಿಯಲ್ಲಿ ತಿಳಿದುಬಂದಿರುವ ಸಂಗತಿಯಾಗಿದೆ.