ಅದೃಷ್ಟದ ಚೊಂಬ ನಂಬಿದವನಿಗೆ ಸ್ನೇಹಿತರಿಂದ ಸಿಕ್ಕಿದ್ದು ಚೊಂಬೇ

ಮೈಸೂರು, ಮಾ. 18: ರೈಸ್ ಪುಲ್ಲಿಂಗ್ (ಅದೃಷ್ಟದ ಚೆಂಬು) ಮತ್ತು ದರೋಡೆ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರ ತಂಡ ಎರಡೂ ಪ್ರಕರಣಗಳಿಂದ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅದೃಷ್ಟದ ಚೆಂಬು ಕೊಡಿಸುವುದಾಗಿ ನಂಬಿಸಿ 33 ಲಕ್ಷ ರೂ. ವಂಚಿಸಿದ್ದ 5 ಮಂದಿಯನ್ನು ಮತ್ತು ದರೋಡೆ ಪ್ರಕರಣವೊಂದರ 3 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ಮಾಹಿತಿ ನೀಡಿದರು.

ಅಮಾಯಕನಿಗೆ ವಂಚಿಸಿದ ಸ್ನೇಹಿತರು:
ತಮ್ಮ ‌ಸ್ನೇಹಿತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಕಿಡಿಗೇಡಿಗಳು ರೈಸ್ ಪುಲ್ಲಿಂಗ್ (ಅದೃಷ್ಟದ ಚೆಂಬು) ಕೊಡಿಸುವ ನೆಪದಲ್ಲಿ 33 ಲಕ್ಷ ರೂ. ಹಣ ಪೀಕಿದ್ದಾರೆ. ನಟೇಶ್, ಅಮೀರ್, ಮಹೇಶ್, ಶ್ರೀನಿವಾಸ್, ಸತೀಶ ಬಂಧಿತರಾಗಿದ್ದು, ಬಂಧಿತರಿಂದ 25 ಲಕ್ಷ ವಶಪಡಿಸಿಕೊಂಡಿರುವ ಪೊಲೀಸರು, ಮತ್ತೊಬ್ಬ ಪ್ರಮುಖ ಆರೋಪಿ ಅಯೂಬ್‌ ಎಂಬಾತನಿಗಾಗಿ ಬಲೆ ಬಿಸಿದ್ದಾರೆ.

ಬಂಧಿತ ಆರೋಪಿಗಳು ಗಾರೆ ಕೆಲಸ ಮಾಡಿಕೊಂಡಿದ್ದು, ತಿ. ನರಸೀಪುರ ತಾಲ್ಲೂಕಿನ ಹಳೇಕೆಂಪಯ್ಯನಹುಂಡಿ ಗ್ರಾಮದ ಸುರೇಶ್ ವಂಚನೆಗೊಳಗಾಗಿದ್ದರು.‌ ಈ ಸಂಬಂಧ ಮಾ.16ರಂದು ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು, ಒಂದೇ ದಿನದಲ್ಲಿ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಹಣಕ್ಕಾಗಿ ಅಪಹರಣ, ಕೊಲೆ ಬೆದರಿಕೆ:
ಮತ್ತೊಂದು ಪ್ರಕರಣದಲ್ಲಿ ಸಿನಿಮಾ ಸ್ಟೈಲ್ ನಲ್ಲಿ‌ ಕಿಡ್ನಾಪ್ ಮಾಡಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡ
ಐವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾವೀದ್ ಖಾನ್, ಮಹಮ್ಮದ್ ನಜೀಬ್ ಹಾಗೂ ಶಾಕೀರುದ್ದೀನ್ ಅವರನ್ನು ಬಂಧಿಸಿದ್ದಾರೆ.

ಆರೋಪಿಗಳು ಮಂಡ್ಯ, ಮೈಸೂರು, ಹಾಸನ ಹಾಗೂ ಬೆಂಗಳೂರಿನ ಠಾಣೆಗಳಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವರುಗಳು ಚಾಮರಾಜನಗರದ ನಿವಾಸಿ ಜಬೀಖಾನ್ ಅವರನ್ನು ಅಪಹರಿಸಿದ್ದರು. ಗ್ರಾನೈಟ್ ಕಮಿಷನ್ ವ್ಯವಹಾರ ಮಾಡುತ್ತಿದ್ದ ಜಬೀಖಾನ್ ಅವರನ್ನು ಅಪಹರಿಸಿದ ಆರೋಪಿಗಳು 1 ಕೋಟಿ ಬೇಡಿಕೆ ಇಟ್ಟಿದ್ದರು.

ಈ ನಡುವೆ ಗಂಡನ ಪ್ರಾಣ ಉಳಿಸಲು ಚಿನ್ನಾಭರಣ ಅಡ ಇಟ್ಟು 6.5 ಲಕ್ಷ ಹಣ ಕೊಟ್ಟಿದ್ದ ಜಬೀಖಾನ್ ಪತ್ನಿ, ಬಳಿಕ ಮನೆಯಿಂದ ಹೊರಬಾರದಂತೆ, ಪೊಲೀಸರಿಗೆ ದೂರು ನೀಡದಂತೆ ನಿರಂತರ ಬೆದರಿಕೆ ಇಟ್ಟಿದ್ದರು. ಎರಡು ತಿಂಗಳ ಬಳಿಕ ಜಬೀಖಾನ್ ಪೊಲೀಸರಿಗೆ ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದ ನಂಜನಗೂಡು ಪೊಲೀಸರು, ಮೂವರನ್ನು ಬಂಧಿಸಿ ಕಾರು, ರಿವಾಲ್ವಾರ್ ಹಾಗೂ ಚಾಕುಗಳನ್ನು ವಶಕ್ಕೆ ಪಡೆದುಕೊಂಡರು ಎಂದು ಎಸ್ಪಿ ರಿಷ್ಯಂತ್ ಮಾಹಿತಿ ನೀಡಿದರು.

Exit mobile version