ಇನ್ನು ಮುಂದೆ ರಿಚರ್ಡ್ ಕ್ಲಾರೆನ್ಸ್ ಶಾಲೆಯಲ್ಲಿ ಕ್ರಿಶ್ಚಿಯನ್ ಮಕ್ಕಳಿಗಷ್ಟೇ ಪ್ರವೇಶ!

richard clarence

ಮುಂದಿನ ಶೈಕ್ಷಣಿಕ ವರ್ಷದಿಂದ ಬೆಂಗಳೂರಿನ(Bengaluru) ರಿಚರ್ಡ್ ಕ್ಲಾರೆನ್ಸ್(Richard Clarence) ಶಾಲೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಮಕ್ಕಳಿಗಷ್ಟೇ ಪ್ರವೇಶ ನೀಡಲಾಗುವುದು ಎಂದು ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.


ಇತ್ತೀಚೆಗೆ ಬೆಂಗಳೂರಿನ ರಿಚರ್ಡ್ ಕ್ಲಾರೆನ್ಸ್ ಶಾಲೆಯಲ್ಲಿ ಅನ್ಯಧರ್ಮದ ಮಕ್ಕಳು ಸೇರಿದಂತೆ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಬೈಬಲ್(Bible) ಕಲಿಯುವಂತೆ ನೀತಿ ರೂಪಿಸಲಾಗಿತ್ತು. ಶಾಲೆಯ ಪ್ರವೇಶ ಅರ್ಜಿಯಲ್ಲಿ ಬೈಬಲ್ ಕಲಿಯಲು ಸಮ್ಮತಿ ಸೂಚಿಸಿದರೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ರಾಜ್ಯ ಶಿಕ್ಷಣ ಕಾಯ್ದೆಯ ಪ್ರಕಾರ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವುದನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಬೈಬಲ್ ಕಲಿಯಲು ಒಪ್ಪಿಗೆ ಸೂಚಿಸಿದವರಿಗೆ ಮಾತ್ರ ಪ್ರವೇಶ ನೀಡುವ ಶಾಲೆಯ ವಿರುದ್ದ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಬಂಧ ಶಿಕ್ಷಣ ಇಲಾಖೆ ಕ್ಲಾರೆನ್ಸ್ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿ ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು. ಇದೀಗ ಈ ಕುರಿತು ಸ್ಪಷ್ಟನೆ ನೀಡಿರುವ ಕ್ಲಾರೆನ್ಸ್ ಶಾಲಾ ಆಡಳಿತ ಮಂಡಳಿ, ನೈತಿಕ ಬೋಧನೆ ದೃಷ್ಠಿಯಿಂದ ನಮ್ಮ ಶಾಲೆಯಲ್ಲಿ ಬೈಬಲ್ ಕಲಿಯುವಂತೆ ಸೂಚಿಸಲಾಗಿತ್ತು. ಬೈಬಲ್ ಕಲಿಯಬೇಕೆಂದು ನಾವು ಯಾವ ಮಗುವಿನ ಮೇಲೆಯೂ ಒತ್ತಡ ಹೇರಿಲ್ಲ. ನಾವು ನಮ್ಮ ಶಾಲೆಯಲ್ಲಿ ನೈತಿಕ ಬೋಧನೆ ಮಾಡುತ್ತಿದ್ದೇವು, ಎಂದಿಗೂ ಧಾರ್ಮಿಕ ಬೋಧನೆ ಮಾಡಿಲ್ಲ. ಇನ್ನು ಬೈಬಲ್‍ನಲ್ಲಿ ಪಾಸಿಂಗ್ ಅಂಕಗಳನ್ನು ತೆಗೆದುಕೊಳ್ಳಬೇಕೆಂದು ಕಡ್ಡಾಯ ಮಾಡಿರಲಿಲ್ಲ.

ಮಕ್ಕಳಿಗೆ ಪ್ರಶಸ್ತಿ ನೀಡುವ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು ಎಂದು ಹೇಳಿದೆ. ಇನ್ನು ನಮ್ಮ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ಯಧರ್ಮದ ಮಕ್ಕಳಿಗೆ ಪ್ರವೇಶ ನೀಡುವುದಿಲ್ಲ. ಕ್ರಿಶ್ಚಿಯನ್ ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುವುದು, ಹಿಂದೂ ಧರ್ಮದ ಮಕ್ಕಳಿಗೆ ಪ್ರವೇಶವಿಲ್ಲ ಎಂದು ಹೇಳಿದೆ.

Exit mobile version