ಹವಾಮಾನ ಮುನ್ಸೂಚನೆ ಸುಧಾರಣೆ ಹಿನ್ನಲೆ, ಅಮೆರಿಕ– ಭಾರತ ಒಪ್ಪಂದ

ಅಮೆರಿಕಾ, ಆ. 11: ಮುಂಗಾರು ಮತ್ತು ಹವಾಮಾನ ಮುನ್ಸೂಚನೆಯ ಸುಧಾರಣೆಯ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕದ ಎರಡು ಸಂಸ್ಥೆಗಳು ಮುಂಗಾರು ದತ್ತಾಂಶವನ್ನು ವಿಶ್ಲೇಷಿಸುವ ಒಪ್ಪಂದವೊಂದಕ್ಕೆ ಸೋಮವಾರ ಸಹಿ ಹಾಕಿವೆ.

ಭಾರತದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ (ಎನ್‌ಐಒಟಿ) ನಿರ್ದೇಶಕ ಜಿ.ಎ. ರಾಮದಾಸ್‌ ಮತ್ತು ಅಮೆರಿಕದ ನ್ಯಾಷನಲ್‌ ಓಷನಿಕ್ ಅಂಡ್ ಅಟ್ಮಾಸ್ಪೆರಿಕ್‌ ಅಡ್ಮಿನಿಸ್ಟ್ರೇಷನ್‌ನ (ಎನ್‌ಒಎಎ) ಹಂಗಾಮಿ ಮುಖ್ಯ ವಿಜ್ಞಾನಿ ಕ್ರೇಗ್‌ ಮ್ಯಾಕ್‌ಲಿಯನ್‌ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಒಪ್ಪಂದದ ಪರಿಣಾಮವಾಗಿ ಈ ಎರಡು ಸಂಸ್ಥೆಗಳು ಆಫ್ರಿಕ -ಏಷ್ಯಾ– ಆಸ್ಟ್ರೇಲಿಯಾದ ಮುಂಗಾರು ವಿಶ್ಲೇಷಣೆ ಮತ್ತು ಮುನ್ಸೂಚನೆ (ಆರ್‌ಎಎಂಎ) ಮತ್ತು ಭಾರತದಲ್ಲಿನ ಹವಾಮಾನ ಮುನ್ಸೂಚನೆಯನ್ನು ಸುಧಾರಿಸಲು ಉಭಯ ದೇಶಗಳ ನಡುವೆ ತಾಂತ್ರಿಕ ಸಹಕಾರವನ್ನು ಹೆಚ್ಚಿಸಲಿವೆ ಎಂದು ಹೇಳಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಭಾರತದ ಭೂ ವಿಜ್ಞಾನ ಸಚಿವಾಲಯ ಮತ್ತು ಎನ್‌ಒಎಎ ನಡುವೆ ಭೂ ವಿಜ್ಞಾನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ ಕುರಿತು ಆಗಿರುವ ಒಡಂಬಡಿಕೆಯ ಮುಂದುವರಿದ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

Exit mobile version