ಸಿಎಂಗೆ ಅಹವಾಲುಗಳನ್ನು ಕಳುಹಿಸಲು ಒಂದೇ ಇ-ಮೇಲ್‌ ಐಡಿ

ಬೆಂಗಳೂರು, ಡಿ. 28: ಮುಖ್ಯಮಂತ್ರಿಗಳಿಗೆ ಏನಾದರೂ ಅಹವಾಲು ಸಲ್ಲಿಸಬೇಕು ಎಂದಾದರೆ ಬೇರೆ ಬೇರೆ ಇ-ಮೇಲ್ ಐಡಿಗಳಿಗೆ ಇನ್ನು ಮೇಲ್​ ಮಾಡಬೇಕಾಗಿಲ್ಲ. ಇನ್ಮುಂದೆ ಒಂದೇ ಇ-ಮೇಲ್ ಐಡಿಗೆ ಎಲ್ಲಾ ಅಹವಾಲುಗಳನ್ನು ಕಳುಹಿಸಬಹುದಾಗಿದೆ. ಜನವರಿ 1ರಿಂದ ಇದು ಚಾಲ್ತಿಗೆ ಬರಲಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಜನವರಿ ಒಂದರಿಂದ ಅಹವಾಲು ಸ್ವೀಕಾರಕ್ಕೆ cm.kar@nic.in ಇ-ಮೇಲ್ ಐಡಿಯನ್ನು ಮಾತ್ರ ಬಳಕೆಯಲ್ಲಿ ಇರಲಿದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ 2020ರ ಆಗಸ್ಟ್ ತಿಂಗಳಿನಿಂದ ಇ-ಮೇಲ್ ಮೂಲಕ ಸ್ವೀಕೃತವಾಗುವ ಅಹವಾಲುಗಳನ್ನು ಇ- ಆಫೀಸ್‌ನಲ್ಲಿಯೇ ನಿರ್ವಹಿಸಲಾಗುತ್ತಿದೆ. ಪ್ರಸ್ತುತ ಮುಖ್ಯಮಂತ್ರಿಗಳ ಸಚಿವಾಲಯವು 3 ಸಕ್ರಿಯ ಇ-ಮೇಲ್ ವಿಳಾಸಗಳನ್ನು ಹೊಂದಿದ್ದು, ಇದರಿಂದ ಅಹವಾಲು ಪುನರಾವರ್ತನೆಯಾಗುತ್ತಿದೆ ಹಾಗೂ ಅನಗತ್ಯ ಗೊಂದಲ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅಹವಾಲು ಸಲ್ಲಿಕೆ ಮತ್ತು ನಿರ್ವಹಣೆಯನ್ನು ಸರಳಗೊಳಿಸಲು ಏಕ ವಿಳಾಸವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಿ, ಮುಂದಿನ ದಿನಗಳಲ್ಲಿ ತಮ್ಮ ಅಹವಾಲು ಮತ್ತು ಇತರ ಸಂವಹನವನ್ನು cm.kar@nic.in ಮೇಲ್ ಐಡಿ ಮೂಲಕವೇ ಮಾಡುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

Exit mobile version