ಕನಸಿನ ಬೈಕ್ ಖರೀದಿಸಲು 3 ವರ್ಷದಿಂದ ಕೂಡಿಟ್ಟ 1 ರೂ. ಚಿಲ್ಲರೆ ಕಾಸು ; 1 ರೂಪಾಯಿ ನಾಣ್ಯ ಎಣಿಸಲು ಬೇಕಾಯಿತು 10 ಗಂಟೆಗಳ ಸಮಯ!

bike purchase

ತಮಿಳುನಾಡಿನ(Tamilnadu) ಸೇಲಂನಲ್ಲಿ(Salem) ಯುವಕನೊಬ್ಬ ತನ್ನ ಕನಸಿನ ಬೈಕ್ ಖರೀದಿ ಮಾಡಬೇಕು ಎಂಬ ಬಯಕೆಯಿಂದ ಕಳೆದ 3 ವರ್ಷಗಳಿಂದ ಒಂದು ರೂಪಾಯಿ ನಾಣ್ಯವನ್ನು ಕೂಡಿಡುವ ಮೂಲಕ ತಾನು ಆಸೆಪಟ್ಟ ಬೈಕನ್ನು ಖರೀದಿ ಮಾಡಿದ್ದಾನೆ. ಶನಿವಾರ 1 ರೂಪಾಯಿ ನಾಣ್ಯದ ಚೀಲವನ್ನು ಬೈಕ್ ಶೋ ರೂಮ್ ಬಳಿ ತಂದು, 2.6 ಲಕ್ಷ ರೂಪಾಯಿ ಹಣವನ್ನು ನೀಡಿ ಬೈಕ್ ಖರೀದಿಸಿದ್ದಾನೆ. ವಿ. ಬೂಬತಿ ಎಂಬ ತಮಿಳುನಾಡಿನ ಯುವಕ ಮೂರು ವರ್ಷಗಳಲ್ಲಿ 1 ರೂಪಾಯಿ ನಾಣ್ಯವನ್ನು ಕೂಡಿಟ್ಟಿದ್ದರು.

ತಾವು ಸಂಗ್ರಹಿಸಿದ ನಾಣ್ಯಗಳನ್ನು ಶೋರೂಮ್‌ಗೆ ತಂದು, ಬಯಸಿದಂತೆ ಹೊಸ ಬಜಾಜ್ ಡೊಮಿನಾರ್ ಖರೀದಿಸಿದರು. ಮೋಟಾರು ಸೈಕಲ್ ಶೋರೂಮ್‌ನ ಸಿಬ್ಬಂದಿ, ಬೂಬತಿ ಅವರ ಮೂರು ವರ್ಷಗಳ ಉಳಿತಾಯದ ಒಂದು ರೂಪಾಯಿ ನಾಣ್ಯವನ್ನು ಎಣಿಸಲು ಬರೋಬ್ಬರಿ 10 ಗಂಟೆಗಳ ಕಾಲಾವಕಾಶ ತೆಗೆದುಕೊಂಡಿದ್ದಾರೆ ಎಂದು ಭಾರತ್ ಏಜೆನ್ಸಿಯ ವ್ಯವಸ್ಥಾಪಕ ಮಹಾವಿಕ್ರಾಂತ್ ಹೇಳಿದರು. ಬೂಬತಿ ಬಿಸಿಎ ಪದವೀಧರರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ ಆರಂಭಿಸುವ ಮುನ್ನ ಖಾಸಗಿ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.

ಮೂರು ವರ್ಷಗಳ ಹಿಂದೆ ಬೈಕ್ ಖರೀದಿಸುವ ಕನಸು ಕಂಡಿದ್ದ ಈತನಿಗೆ, ಆಗ 2 ಲಕ್ಷ ರೂಪಾಯಿ ಬೆಲೆ ಇದ್ದ ಕಾರಣ ಹಣ ಇರಲಿಲ್ಲ. ಆದ್ರೆ, ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡ ಬೂಬತಿ, ತಮ್ಮ ಪಿಗ್ಗಿ ಬ್ಯಾಂಕ್‌ನಲ್ಲಿ ಪ್ರತಿದಿನ 1 ರೂಪಾಯಿ ನಾಣ್ಯಗಳನ್ನು ತುಂಬಿಸುತ್ತ ಬಂದರು. ತನ್ನ ಆಸೆಯಂತೆ ಕೂಡಿಟ್ಟ ಹಣವನ್ನು ತಂದು ಬೈಕ್ ಖರೀದಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

Exit mobile version