ಡಿಕೆಶಿ ವರ್ತನೆಯಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್‍ನಿಂದ ದೂರ ಸರಿಯುತ್ತಿದೆ : ಜಮೀರ್ ದೂರು!

congress

ರಾಜ್ಯ(State) ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ ಶಿವಕುಮಾರ್(DK Shivkumar) ಅವರು ಮುಸ್ಲಿಂ(Muslim)ಸಮುದಾಯದ ವಿಚಾರದಲ್ಲಿ ತೆಗೆದುಕೊಳ್ಳುತ್ತಿರುವ ನಿಲುವುಗಳಿಂದ ಇಡೀ ಸಮುದಾಯ ಅಸಮಾಧಾನಗೊಂಡಿದೆ. ಯಾವುದೇ ನಿರ್ದಿಷ್ಟ ಮತ್ತು ನಿಖರ ನಿಲುವನ್ನು ಹೊಂದಲು ಡಿ.ಕೆ ಶಿವಕುಮಾರ್ ಅವರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್‍ನಿಂದ ದೂರ ಸರಿಯುತ್ತಿದೆ ಎಂದು ಕಾಂಗ್ರೆಸ್‍ನ ಪ್ರಭಾವಿ ಅಲ್ಪಸಂಖ್ಯಾತ ಶಾಸಕ ಜಮೀರ್ ಅಹ್ಮದ್ ಖಾನ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಜಮೀರ್ ಅಹ್ಮದ್ ನೀಡಿರುವ ದೂರಿನ ಹಿನ್ನಲೆಯಲ್ಲಿ ಅವರ ಮನವೊಲಿಸಲು ರಣದೀಪ್ ಸುರ್ಜೆವಾಲಾ ಜಮೀರ್‍ನೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾಗವಾಗಲು ಶಾಸಕ ಅಖಂಡ ಶ್ರೀನಿವಾಸಮೂರ್ತಿಯೊಂದಿಗೆ ತೆರಳಿದ ಜಮೀರ್, ನನ್ನ ಮನೆಗೆ ಬೆಂಕಿ ಹಾಕಿ, ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಾರೆ. ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದ ವೇಳೆ, ಅವರನ್ನೆಲ್ಲಾ ವೇದಿಕೆಗೆ ಕರೆಸಿ ಸನ್ಮಾನ ಮಾಡಿಸುತ್ತಾರೆ. ಹೀಗಾದರೆ ಹೇಗೆ? ಎಂದು ಅಖಂಡ ಶ್ರೀನಿವಾಸಮೂರ್ತಿ ತಮ್ಮ ಅಸಮಾದಾನವನ್ನು ಸುರ್ಜೆವಾಲಾ ಬಳಿ ಹೊರಹಾಕಿದ್ದಾರೆ.


ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವರ್ತನೆಯಿಂದ ಬೇಸರಗೊಂಡಿರುವ ಜಮೀರ್ ಅಹ್ಮದ್ ಖಾನ್ ಕೆಪಿಸಿಸಿ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ. ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಸರ್ಕಾರದ ವಿರುದ್ದ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗಳಲ್ಲಿಯೂ ಜಮೀರ್ ಕಾಣಿಸಿಕೊಳ್ಳುತ್ತಿಲ್ಲ. ಹಿಜಾಬ್ ಮತ್ತು ಹಲಾಲ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಗೆದುಕೊಂಡಿರುವ ನಿಲುವಿನಿಂದ ಜಮೀರ್ ತೀವ್ರ ಬೇಸರಗೊಂಡಿದ್ದಾರೆ. ನನ್ನ ಸಮುದಾಯವನ್ನು ಡಿಕೆಶಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿರುವ ಮುಸ್ಲಿಂ ಸಮುದಾಯಕ್ಕೆ ಯಾವುದೇ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂಬ ಬೇಸರವನ್ನು ಜಮೀರ್ ಹೊರಹಾಕಿದ್ದಾರೆ ಎನ್ನಲಾಗಿದೆ.

Exit mobile version