ಚುನಾವಣೆಗಳಲ್ಲಿ ವರ್ಕೌಟ್ ಆಗುತ್ತಿಲ್ಲ ಕಾಂಗ್ರೆಸ್‍ನ ಜಾತಿ ಲೆಕ್ಕಾಚಾರ!

congress

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್(Congress) ಅನೇಕ ರಣತಂತ್ರಗಳನ್ನು ಹೆಣೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಜಾತಿ ಸಮೀಕರಣ ಹೆಚ್ಚಾಗಿ ಕೆಲಸ ಮಾಡುತ್ತದೆ. ಉತ್ತರ ಭಾರತದ ರಾಜ್ಯಗಳಲ್ಲಿ ‘ಹಿಂದುತ್ವ’ ಕೆಲಸ ಮಾಡಿದರೆ, ದಕ್ಷಿಣದ ರಾಜ್ಯಗಳಲ್ಲಿ ‘ಜಾತಿ ಸಮೀಕರಣ’ ಆಧಾರಿತ ರಾಜಕೀಯ ನಡೆಯುತ್ತದೆ. ಹೀಗಾಗಿ ಈ ಬಾರಿ ಯಾವ ಜಾತಿ ಸಮೀಕರಣವನ್ನು ರೂಪಿಸಿದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ರೂಪಿಸುತ್ತಿದೆ.

ಕಾಂಗ್ರೆಸ್ ರೂಪಿಸುತ್ತಿರುವ ಜಾತಿ ಸಮೀಕರಣಗಳು ನಿರೀಕ್ಷಿತ ಫಲಿತಾಂಶ ನೀಡುವ ಸಾಧ್ಯತೆ ಕಡಿಮೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿದೆ. ಅದಕ್ಕೆ ಮುಖ್ಯಕಾರಣ ಈ ಹಿಂದಿನ ಜಾತಿ ಸಮೀಕರಣಗಳು ಸದ್ಯ ರಾಜ್ಯ ರಾಜಕೀಯದಲ್ಲಿ ವರ್ಕೌಟ್ ಆಗುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಲ್ಲಿ ಕುರುಬ ಸಮುದಾಯ ಕಾಂಗ್ರೆಸ್‍ನ್ನು ಬೆಂಬಲಿಸಿದ್ದವು. ಅದೇ ರೀತಿ ದಲಿತ ಸಮುದಾಯದಲ್ಲಿ ಎರಡು ಬಣಗಳಾಗಿದ್ದು, ಒಂದು ಬಣ ಮಾತ್ರ ಕಾಂಗ್ರೆಸ್‍ನ್ನು ಬೆಂಬಲಿಸುತ್ತಿದೆ.

ನಾಯಕ ಸಮುದಾಯ ಬಿಜೆಪಿಯೊಂದಿಗೆ ಹೆಚ್ಚಿನ ಸಖ್ಯ ಸಾಧಿಸಿರುವುದು ಕಾಂಗ್ರೆಸ್‍ಗೆ ದೊಡ್ಡ ತಲೆನೋವಾಗಿದೆ. ಆ ಸಮುದಾಯದ ಪ್ರಬಲ ಮುಖಂಡ ರಮೇಶ್ ಜಾರಕಿಹೊಳಿ(Ramesh Jarakiholi) ಕಾಂಗ್ರೆಸ್ ತೊರೆದಿರುವುದು ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. ಇನ್ನೊಂದೆಡೆ ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯ ಕಳೆದ ಬಾರಿ ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡಿತ್ತು. ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ ದೇವೇಗೌಡರನ್ನು ಅವಮಾನಿಸಿದ್ದಕ್ಕಾಗಿ ಸಿದ್ದರಾಮಯ್ಯ ವಿರುದ್ದ ಒಕ್ಕಲಿಗ ಸಮುದಾಯ ತಿರುಗಿ ಬಿದ್ದಿದ್ದು, 2018 ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರವಾಗಿತ್ತು.

ಹೀಗಾಗಿ ಕಳೆದ ಬಾರಿಯ ಜಾತಿ ಸಮೀಕರಣವನ್ನು ಬಿಟ್ಟು ಸಣ್ಣಪುಟ್ಟ ಜಾತಿಗಳನ್ನು ಒಗ್ಗೂಡಿಸುವ ಮತ್ತು ಪ್ರಬಲ ಜಾತಿಗಳೊಂದಿಗೆ ಸಂಘರ್ಷಕ್ಕೆ ಇಳಿಯದಿರಲು ಕಾಂಗ್ರೆಸ್ ತಂತ್ರ ಹೆಣೆದಿದೆ. ಇನ್ನು ಕಳೆದ ಚುನಾವಣೆಯಲ್ಲಿ ಲಿಂಗಾಯತರ ವಿಷಯಕ್ಕೆ ಕೈಹಾಕಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಘಟಾನುಘಟಿ ಲಿಂಗಾಯತ ನಾಯಕರೇ ಚುನಾವಣೆಯಲ್ಲಿ ಸೋತರು. ಹೀಗಾಗಿ ಈ ಬಾರಿ ಎಂ.ಬಿ.ಪಾಟೀಲ್ ಅವರನ್ನು ಮುನ್ನಲೆಗೆ ತಂದು ಲಿಂಗಾಯತ ಮತಬುಟ್ಟಿಗೆ ಕೈಹಾಕಲು ಕಾಂಗ್ರೆಸ್ ಮುಂದಾಗಿದೆ.

ಉತ್ತರಕರ್ನಾಟಕದ ಭಾಗದಲ್ಲಿ ಎಂ.ಬಿ.ಪಾಟೀಲ್ ಲಿಂಗಾಯತ ಸಮುದಾಯದ ಮೇಲೆ ಪ್ರಬಲ ಹಿಡಿತ ಹೊಂದಿದ್ದಾರೆ. ಆದರು ರಾಜಕೀಯವಾಗಿ ಲಿಂಗಾಯತ ಸಮುದಾಯ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ. ಈ ಎಲ್ಲ ಕಾರಣದಿಂದ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ, ಕುರುಬ ಮತ್ತು ಸಣ್ಣ ಸಮುದಾಯಗಳ ಒಕ್ಕೂಟ ರಚಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇತ್ತೀಚೆಗೆ ಇದೇ ತಂತ್ರದ ಮೂಲಕವೇ ಬಿಜೆಪಿ ಉತ್ತರ ಪ್ರದೇಶದಂತ ದೊಡ್ಡ ರಾಜ್ಯಗಳನ್ನು ಗೆದ್ದಿತ್ತು. ಸಣ್ಣಸಣ್ಣ ಜಾತಿಗಳೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದು ಇತ್ತೀಚಿನ ಚುನಾವಣೆಗಳಲ್ಲಿ ಸಾಭೀತಾಗಿದೆ.

Exit mobile version