ಎಸ್‌ಡಿಪಿಐ-ಎಐಎಂಐಎಂ ಪರ ಒಲವು ; ಕಾಂಗ್ರೆಸ್ ಕೈ ತಪ್ಪಲಿವೆ ಮುಸ್ಲಿಂ ಮತಗಳು

congress

ನವದೆಹಲಿ : ೨೦೨೩ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(Vidhansabha Elections) ಕಾಂಗ್ರೆಸ್ ಪಕ್ಷಕ್ಕೆ(Congress Party) ಮುಸ್ಲಿಂ ಮತಗಳು ಸಿಗುವುದು ಕಷ್ಟವೆಂದು ವರದಿಯೊಂದು ತಿಳಿಸಿದೆ. ಈ ಕುರಿತು ದೆಹಲಿ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಇತ್ತೀಚಿನ ಬೆಳವಣಿಗೆಗಳಿಂದ ಮುಸ್ಲಿಂ ಮತದಾರರು ಕಾಂಗ್ರೆಸ್ ಪಕ್ಷದಿಂದ ದೂರವಾಗುತ್ತಿದ್ದಾರೆ ಎಂಬ ಆತಂಕವನ್ನು ಕಾಂಗ್ರೆಸ್ ಹೈಕಮಾಂಡ್ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಕರ್ನಾಟಕದ ರಾಜಕೀಯ ಕುರಿತು ರಾಷ್ಟ್ರೀಯ ಕಾಂಗ್ರೆಸ್ ನಡೆಸಿದ ಸಮೀಕ್ಷೆಯ ಪ್ರಕಾರ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದ್ದು, ಶೇಕಡಾ ೨೦ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ನ ಕೈ ತಪ್ಪಬಹುದು ಎಂದು ಹೇಳಲಾಗಿದೆ. ಮುಸ್ಲಿಂ ವ್ಯಾಪಾರ ನಿರ್ಬಂಧ, ಹಿಜಾಬ್ ವಿವಾದ, ಹಲಾಲ್ ವಿವಾದಗಳಲ್ಲಿ ಕಾಂಗ್ರೆಸ್ ಪಕ್ಷವೂ ಮುಸ್ಲಿಂ ಸಮುದಾಯದ ಜೊತೆ ನಿಲ್ಲಲಿಲ್ಲ ಎಂಬ ಅಸಮಾಧಾನ ಸಮುದಾಯದಲ್ಲಿದೆ. ಇನ್ನು ರಾಜ್ಯಸಭಾ ಚುನಾವಣೆಯಲ್ಲಿಯೂ ಮನ್ಸೂರ್ ಅಲಿಖಾನ್ ಅವರನ್ನು ಎರಡನೇಯ ಅಭ್ಯರ್ಥಿಯನ್ನಾಗಿಸಿದ್ದು ಕೂಡಾ ಪರಿಣಾಮ ಬೀರಿದೆ ಎನ್ನಲಾಗಿದೆ.

ಮುಸ್ಲಿಂ ಮತದಾರರು ಎಸ್‌ಡಿಪಿಐ(SDPI) ಮತ್ತು ಓವೈಸಿಯ ಎಐಎಂಐಎಂ ಪಕ್ಷದ(AIMIM) ಪರ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿ ಕುರಿತು ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ(Randeep Surjewala), ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar), ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್,

ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮತ್ತು ಚುನಾವಣಾ ನೀತಿ ನಿರೂಪಕ ಸುನೀಲ್ ಕನುಗೋಲು ಭಾಗಿಯಾಗಿದ್ದರು. ಈ ಸಭೆಯಲ್ಲಿ ಕರ್ನಾಟಕ ರಾಜ್ಯ ರಾಜಕೀಯದ ಕುರಿತು ಚರ್ಚೆ ನಡೆಸಲಾಗಿದ್ದು, ಮುಸ್ಲಿಂ ಸಮುದಾಯದ ಮತಗಳು ಕೈತಪ್ಪದಂತೆ ಎಚ್ಚರ ವಹಿಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Exit mobile version