ಕೊರೊನಾ ಆತಂಕ: ಶೈಕ್ಷಣಿಕ ವ್ಯವಸ್ಥೆ ಹಳಿತಪ್ಪದಂತೆ ಸರ್ಕಾರದ ಕ್ರಮ: ಅಶ್ವಥ್ ನಾರಾಯಣ್

ಬೆಂಗಳೂರು, ಮಾ. 15: ಕೊರೊನಾ ಸಂಕಷ್ಟದ ನಡುವೆ ಶೈಕ್ಷಣಿಕ ವ್ಯವಸ್ಥೆ ಹಳಿತಪ್ಪದಂತೆ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನರು ಯಾವುದೇ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡಬೇಡಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಿಗೆ ಮಾ.15ರಿಂದ ಮಾ.30ರವರೆಗೆ ರಜೆ ನೀಡಲಾಗಿದೆ ಎಂಬ ಸಂದೇಶವುಳ್ಳ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಈ ಕುರಿತು ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್, ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಸರ್ಕಾರಿ-ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳುಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಈ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಲ್ಲದೇ, ಕೋವಿಡ್ ಸಂಕಷ್ಟದಿಂದ ಶೈಕ್ಷಣಿಕ ವ್ಯವಸ್ಥೆ ಹಳಿ ತಪ್ಪದಂತೆ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಸುಳ್ಳು ಸುದ್ದಿಗಳಿಗೆ ಆಸ್ಪದ ಬೇಡ. ನಿಯಮಗಳನ್ನು ಪಾಲಿಸೋಣ. ಕೋವಿಡ್ ವಿರುದ್ಧ ನಮ್ಮ ಸಂಘಟಿತ ಸಮರದಲ್ಲಿ ಜಾಗೃತರಾಗೋಣ ಎಂದು ಮನವಿ ಮಾಡಿದ್ದಾರೆ.

Exit mobile version