ಕೊರೊನಾದ ಹೊಸ ರೂಪಾಂತರಿ AY 4.2 ರಾಜ್ಯದ 7 ಜನರಲ್ಲಿ ಪತ್ತೆ

  ಬೆಂಗಳೂರು ಅ.26  : ಒಂದೆಡೆ ಕೊರೊನಾ ಹಾವಳಿ ಕೊಂಚ ಕಡಿಮೆಯಾಗುತ್ತಿದ್ದಂತೆ ಮತ್ತೆ  ಹೊಸ ರೂಪಾಂತರಿ ವೈರಸ್‌ ಎವೈ4.2 ರಾಜ್ಯದ 7 ಮಂದಿಯಲ್ಲಿ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 3 ಹಾಗೂ ಇತರ ಕೆಲ ಜಿಲ್ಲೆಗಳಲ್ಲಿ 4 ಮಂದಿಗೆ ಎವೈ 4.2 ವೈರಾಣು ಸೋಂಕು ತಗುಲಿರುವುದು ಖಚಿತವಾಗಿದೆ. ಈಗಾಗಲೇ ಬೇರೆ ದೇಶಗಳಲ್ಲಿ ಎವೈ4.2 ಸೋಂಕು ಸ್ಪೋಟಗೊಂಡಿದೆ. ಹೀಗಾಗಿ ಭಾರತದಲ್ಲೂ ಎವೈ4.2 ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದರೂ ದೇಶದ ಹಲವು ರಾಜ್ಯಗಳಲ್ಲಿ ಹೊಸ ರೂಪಾಂತರಿ ಕಾಣಿಸಿಕೊಂಡಿದ್ದು, ಇದೀಗ ರಾಜ್ಯದ 7 ಮಂದಿಗೂ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಆತಂಕ ಹೆಚ್ಚಾಗಿದೆ.

ಮೂರನೆ ಕೊರೊನಾ ಅಲೆಗೆ ಕಾರಣವಾಗಬಹುದು ಎಂದು ಶಂಕಿಸಿರುವ ಎವೈ4.2 ಸೋಂಕು ಡೆಲ್ಟಾ ವೈರಾಣುಗಳಿಗಿಂತ ಅತ್ಯಂತ ವೇಗವಾಗಿ ಹರಡಬಲ್ಲ ಸಾಮರ್ಥ್ಯ ಹೊಂದಿರುವುದರಿಂದ ರಾಜ್ಯದೆಲ್ಲೆಡೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಶಾಲೆಗಳು ಕೆಲ ದಿನಗಳ ಹಿಂದಷ್ಟೇ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲೇ ಎವೈ4.2 ವೈರಾಣು ಪತ್ತೆಯಾಗಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಡೆಲ್ಟಾ ವೈರಸ್‍ಗಿಂತ ಅತ್ಯಂತ ವೇಗವಾಗಿ ಹರಡಬಲ್ಲ ಸಾಮಥ್ರ್ಯ ಹೊಂದಿರುವ ಎವೈ4.2 ವೈರಸ್‍ನಿಂದ ಇದುವರೆಗೂ ಯಾವುದೇ ಸಾವು-ನೋವು ಸಂಭವಿಸಿಲ್ಲ. ಹೀಗಾಗಿ ಜನ ಆತಂಕಕ್ಕೆ ಒಳಗಾಗುವುದು ಬೇಡ. ಹೊರ ದೇಶಗಳಿಂದ ಭಾರತಕ್ಕೆ ಭೇಟಿ ನೀಡುತ್ತಿರುವವರ ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಸೋಂಕು ಉಲ್ಬಣಗೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.

Exit mobile version