ಹುಟ್ಟುಹಬ್ಬಕ್ಕೆ ಅನಗತ್ಯ ದುಂದುವೆಚ್ಚ ಮಾಡದೆ‌ ಕೊರೊನಾ ಸಂತ್ರಸ್ತರಿಗೆ ನೆರವಾಗಿ: ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿನಂತಿ

ಬೆಂಗಳೂರು, ಮೇ. 15: ಕೊರೊನಾ‌ ಹಿನ್ನೆಲೆಯಲ್ಲಿ ತಮ್ಮ ಹುಟ್ಟುಹಬ್ಬದ ಸಲುವಾಗಿ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಮನವಿ‌ ಮಾಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಅನಗತ್ಯವಾಗಿ ದುಂದುವೆಚ್ಚ ಮಾಡದೆ ಕೊರೊನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯಗಳ ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ‌ನೀಡಿರುವ ಮಾಜಿ ಪ್ರಧಾನಿ ದೇವೇಗೌಡರು, ಮೇ 18ರಂದು ನನ್ನ ಹುಟ್ಟುಹಬ್ಬದ ಸಲುವಾಗಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಂದು ಅದಕ್ಕಾಗಿ ಸಡಗರ ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಳ್ಳಬಾರದು ಎಂದು ವಿನಂತಿಸಿದ್ದಾರೆ.

ಕೊರೊನಾ ಮಹಾಮಾರಿಯಿಂದ ಇಡೀ ರಾಜ್ಯದ ಜನತ ಸಂಕಷ್ಟ ಮತ್ತು ನೋವಿನಲ್ಲಿ ತತ್ತರಿಸುತ್ತಿರುವಾಗ ನಾವು ಪರಿಸ್ಥಿತಿ ಅರ್ಥೈಸಿಕೊಳ್ಳಬೇಕು. ನಿಮ್ಮ ಅಭಿಮಾನ ಹಾರೈಕೆ ರೂಪದಲ್ಲಿ ನೀವಿರುವಲ್ಲಿಯೇ ವ್ಯಕ್ತವಾಗಲಿ. ಹುಟ್ಟು ಹಬ್ಬದ ನಿಮಿತ್ತ ಹಾರ, ತುರಾಯಿ, ಕೇಕ್, ಸಿಹಿ ಎಂದು ಅನಗತ್ಯವಾಗಿ ದುಂದುವೆಚ್ಚ ಮಾಡಬೇಡಿ.

ಬದಲಿಗೆ ಅದನ್ನೇ ನಿಮ್ಮ ಭಾಗದ ಕೊರೊನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯಗಳ ಪೂರೈಕೆಗೆ ಬಳಸಿದರೆ ಅದು ನಿಜಕ್ಕೂ ಸದುಪಯೋಗ ಆಗಲಿದ್ದು, ದೇವರು ಮೆಚ್ಚುತ್ತಾನೆ ಎಂದು ಕಿವಿಮಾತು ಹೇಳಿದ್ದಾರೆ.

Exit mobile version