ಹಳ್ಳಿಗಳಿಗೂ ವಕ್ಕರಿಸಿದ ಕೊರೊನಾ: ಹಾಲಿನ ಡೈರಿಗಳಿಂದ ಹಬ್ಬುತ್ತಿದೆ ಮಹಾಮಾರಿ?: ಎಚ್ಡಿಕೆ ಕಳವಳ

ಬೆಂಗಳೂರು, ಮೇ. 17: ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೊನಾ ಇದೀಗ ಗ್ರಾಮೀಣ ಪ್ರದೇಶಗಳಿಗೂ ವಕ್ಕರಿಸಿದ್ದು, ಇದರ ಬೆನ್ನಲ್ಲೇ ಗ್ರಾಮೀಣ ಭಾಗದ ಜನರ ಜೀವನಾಡಿ ಎನಿಸಿರುವ ಹಾಲಿನ ಡೈರಿಗಳು‌ ಕೊರೊನಾ ಹರಡುವ ಹಾಟ್ ಸ್ಪಾಟ್ ಆಗಿದ್ಯಾ? ಎಂಬ ಆತಂಕ ಶುರುವಾಗಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕೋವಿಡ್ 19 ಈಗ ಹಳ್ಳಿ ಹಳ್ಳಿಗಳನ್ನು ವೇಗವಾಗಿ ವ್ಯಾಪಿಸುತ್ತಿದೆ. ಸೋಂಕಿತರು ಹಾಲನ್ನು ಡೈರಿಗಳಿಗೆ ತಂದು ಹಾಕುತ್ತಿರುವುದರಿಂದ ರೋಗ ಇನ್ನಷ್ಟು ಹಬ್ಬುತ್ತಿದೆ. ಗ್ರಾಮೀಣ ಭಾಗದ ಈ ಹೊಸ ಸಮಸ್ಯೆಯನ್ನು ಸರಕಾರ, ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಈಗಲೇ ಜಾಗೃತಿ ಮೂಡಿಸದಿದ್ದರೆ ಹಳ್ಳಿಗಳಲ್ಲಿ ಸಾವುನೋವಿನ ಪ್ರಮಾಣ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಕೋವಿಡ್ ಸೋಂಕಿತರ ಮನೆಯ ರಾಸುಗಳಿಂದ ಕರೆದ ಹಾಲನ್ನು ಸೋಂಕಿತರೇ ನೇರವಾಗಿ ಡೈರಿಗೆ ತಂದು ಹಾಲು ಹಾಕುವುದು ಬೇಡ. ಸೋಂಕಿತರಲ್ಲದ ಮನೆಯ ಆರೋಗ್ಯವಂತ ಸದಸ್ಯರು ಹಾಲನ್ನು ತಂದುಹಾಕುವುದರಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಬಹುದು ಎಂಬ ಸಲಹೆ ನೀಡಿದ್ದಾರೆ.

ಜೊತೆಗೆ, ಡೈರಿಗೆ ಹಾಲು ಹಾಕಲು ಬಂದವರು ಕಡ್ಡಾಯವಾಗಿ ಶುಚಿತ್ವ, ಮಾಸ್ಕ್, ಸ್ಯಾನಿಟೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಲ್ಲದೇ ಕಡ್ಡಾಯವಾಗಿ ಡೈರಿಗಳಲ್ಲಿ ಶುಚಿತ್ವ ಕಾಪಾಡುವುದರ ಜೊತೆಗೆ ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕು. ಹಾಲು ಉತ್ಪಾದಕ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಬೇಕು. ಪಶುವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಬೇಕು ಎಂದು ಆಗ್ರಹಿಸಿದ್ದಾರೆ.

Exit mobile version