ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಿದ್ದ ಆರೋಗ್ಯಾಧಿಕಾರಿ ಅಮಾನತು

ಬೆಂಗಳೂರು, ಎ. 02: ಕೋವಿಡ್ ನಿಯಮ ಉಲ್ಲಂಘಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ್  ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಿದ್ದ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಮಕಾಂದಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಮಾರ್ಚ್ 2ರಂದು ಸಚಿವರ ಮನೆಗೆ ತೆರಳಿದ್ದ ಆರೋಗ್ಯ ಅಧಿಕಾರಿ ಮಕಾಂದಾರ್, ಸಚಿವ ಬಿ.ಸಿ.ಪಾಟೀಲ್ ಹಾಗೂ ಪತ್ನಿ ವನಜಾ ಪಾಟೀಲ್ ಅವರಿಗೆ ಕೊರೊನಾ ಲಸಿಕೆ ನೀಡಿದ್ದರು. ಆದರೆ ವೈದ್ಯಾಧಿಕಾರಿಯ ಈ ನಡೆ ಕೋವಿಡ್ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಸಚಿವರು ಮಾಡಿದ ತಪ್ಪಿಗೆ ಇದೀಗ ಆರೋಗ್ಯಾಧಿಕಾರಿಗೆ ಶಿಕ್ಷೆಗೆ ಗುರಿಯಾಗಿದ್ದಾರೆ.

ಸಚಿವರ ಮನೆಗೆ ತೆರಳಿ ಲಸಿಕೆ‌ ನೀಡಿದ್ದ ಘಟನೆ ಕುರಿತಂತೆ ಎಲ್ಲೆಡೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ ತನಿಖೆ ನಡೆಸಿದ ಆರೋಗ್ಯ ಇಲಾಖೆ, ಕೋವಿಡ್ ನಿಯಮ ಉಲ್ಲಂಘಿಸಿ ಸಚಿವರ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಿದ ಆರೋಗ್ಯಾಧಿಕಾರಿ ಮಕಾಂದಾರ್ ಅವರನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಬಂದು ಲಸಿಕೆ ಪಡೆದಿದ್ದಾರೆ. ಅಲ್ಲದೇ ಪ್ರತಿಯೊಬ್ಬರು ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬೇಕೆಂದು ನಿಯಮ ಹೇಳುತ್ತದೆ. ಆದರೆ, ಸಚಿವರು ಆರೋಗ್ಯಾಧಿಕಾರಿಯನ್ನು ಮನೆಗೆ ಕರೆಯಿಸಿಕೊಂಡು ಲಸಿಕೆ ಪಡೆದಿದ್ದರು.

Exit mobile version