New Delhi: ತಮಿಳುನಾಡಿನ (Tamilnadu) ಬಿಳಿಗುಂಡ್ಲುವಿಗೆ ನವೆಂಬರ್ 1ರಿಂದ 15ರವರೆಗೆ ಕನಿಷ್ಠ 2,600 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ (Karnataka) ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಶಿಫಾರಸು ಮಾಡಿದೆ.
ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಪ್ರಾಧಿಕಾರದ ಸಭೆಯ ಬಳಿಕ ಈ ಆದೇಶ ಹೊರಡಿಸಲಾಗಿದ್ದು, ಮುಂದಿನ 15 ದಿನಗಳ ಕಾಲ ತಮಗೆ ಪ್ರತಿನಿತ್ಯ 13 ಸಾವಿರ ಕ್ಯುಸೆಕ್ ನೀರು ಬಿಡಬೇಕೆಂದು ಆಗ್ರಹಿಸಿ ತಮಿಳುನಾಡು ಮನವಿ ಮಾಡಿತ್ತು. ಒಂದು ವೇಳೆ 15 ದಿನಗಳ ಕಾಲ ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಬಿಟ್ಟಲ್ಲಿ ಅದರ ಪ್ರಮಾಣ 16.90 ಕ್ಯುಸೆಕ್ (Cusack) ಆಗುತ್ತದೆ.
ಆದರೆ ಕಾವೇರಿ ಕೊಳ್ಳದಲ್ಲಿ ಈ ಬಾರಿ ಮಳೆ ಕೊರತಯಿಂದಾಗಿ ನೀರಿನ ಕೊರತೆ ಎದುರಾಗಿದ್ದು, ಎಲ್ಲಾ ಜಲಾಶಯಗಳಿಗೂ ಒಳಹರಿವು ನಿಂತೇ ಹೋಗಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ ಎಂದು ಪ್ರಾಧಿಕಾರಕ್ಕೆ ಕರ್ನಾಟಕ ಮಾಹಿತಿ ನೀಡಿತ್ತು.ಅಂತಿಮವಾಗಿ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಕಾವೇರಿ ಕೊಳ್ಳದ ಜಲಾಶಗಳಲ್ಲಿ ಇರುವ ನೀರಿನ ಸಂಗ್ರಹವನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿನಿತ್ಯ 2600 ಕ್ಯುಸೆಕ್ ನೀರು ಬಿಡುಗಡೆಗೊಳಿಸಲು ಆದೇಶಿಸಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K.Shivakumar) ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸದ್ಯ ರಾಜ್ಯ ಕಾವೇರಿ ನೀರು ಬಿಡುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ದೇವರ ಮೊರೆ ಹೋಗೋಣ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾಗಿರುವ ಕನ್ನಂಬಾಡಿಯಲ್ಲಿ ಶೇ.45ರಷ್ಟು ನೀರಿನ ಸಂಗ್ರಹವಿದೆ. ಒಟ್ಟು 124.80 ಅಡಿ ಎತ್ತರದ ಜಲಾಶಯದಲ್ಲಿ ಇದೀಗ ಕೇವಲ 99.44 ಅಡಿ ನೀರಿದೆ. ಅದೇ ರೀತಿ ಕಬಿನಿಯಲ್ಲಿ ಶೇ 68 ರಷ್ಟು ನೀರಿದ್ದರೆ, ಹೇಮಾವತಿ ಡ್ಯಾಂನಲ್ಲಿ ಶೇ.68 ರಷ್ಟು ನೀರಿನ ಸಂಗ್ರಹವಿದೆ.
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 15 ರವರೆಗೆ 5,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ CWRC ಸೆಪ್ಟೆಂಬರ್ನಲ್ಲಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಸುಪ್ರೀಂ ಕೋರ್ಟ್ (Supreme Court) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ.
ಭವ್ಯಶ್ರೀ ಆರ್.ಜೆ