ಪಶ್ಚಿಮ ಬಂಗಾಳದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಬಂಧನದ ವಾರೆಂಟ್ ತಡೆ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ, ಮಾ. 10: ಪಶ್ಚಿಮ ಬಂಗಾಳ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ವಿರುದ್ಧ ಹೊರಡಿಸಲಾಗಿರುವ ಜಾಮೀನು ರಹಿತ ಬಂಧನದ ವಾರಂಟ್ ಅನ್ನು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ತಡೆ ಹಿಡಿಯುವಂತೆ ಸುಪ್ರೀಂಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

2019ರ ಲೋಕಸಭಾ ಚುನಾವಣಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ಘೋಷ್ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಲಾಗಿತ್ತು. ಭಾರತಿ ಘೋಷ್, ಮಾಜಿ ಐಪಿಎಸ್ ಅಧಿಕಾರಿ, ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಹುಮಾಯೂನ್ ಕಬೀರ್ ವಿರುದ್ಧ ಡರ್ಬಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಘೋಷ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಅಬ್ದುಲ್ ನಜೀರ್ ಮತ್ತು ಹೇಮಂತ್ ಗುಪ್ತಾ ಅವರ ನ್ಯಾಯಪೀಠ ಹೇಳಿದೆ. ಎರಡು ತಿಂಗಳ ನಂತರ ಹೆಚ್ಚಿನ ವಿಚಾರಣೆಗೆ ಈ ಪ್ರಕರಣವನ್ನು ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

2019ರ ಲೋಕಸಭಾ ಚುನಾವಣೆಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಹಾಗೂ ಬಂಧನದ ವಾರಂಟ್ ತಡೆಹಿಡಿಯಬೇಕು ಎಂದು ಕೋರಿ ಭಾರತಿ ಘೋಷ್ ಸೋಮವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

Exit mobile version