ಡೆನ್ಮಾರ್ಕ್ ಪ್ರಧಾನಿ ಜೊತೆ ಮೋದಿ ಮಹತ್ವದ ಮಾತುಕತೆ

ನವದೆಹಲಿ ಅ 9 : ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಇಂದು ಭಾರತಕ್ಕೆ ಆಗಮಿಸಿದ್ದಾರೆ. ಫ್ರೆಡೆರಿಕ್ಸನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಫ್ರೆಡೆರಿಕ್ಸನ್ ಅವರನ್ನು ಸ್ವಾಗತಿಸಿದ ಮೋದಿ ಮಹತ್ವದ ಮಾತುಕತೆ ನಡೆಸಿದರು.

ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಫ್ರೆಡೆರಿಕ್ಸನ್ ಅವರಿಗೆ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಲ್ಲಿ ಅವರನ್ನು ಬರಮಾಡಿಕೊಂಡು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರಿಗೆ ಗೌರವವನ್ನು ನೀಡಲಾಯಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ಫ್ರೆಡೆರಿಕ್ಸನ್, ಡೆನ್ಮಾರ್ಕ್ ಭಾರತವನ್ನು ನಿಕಟ ಪಾಲುದಾರ ಎಂದು ಪರಿಗಣಿಸುತ್ತದೆ ಮತ್ತು ಈ ಭೇಟಿಯನ್ನು ಡೆನ್ಮಾರ್ಕ್-ಭಾರತ ದ್ವಿಪಕ್ಷೀಯ ಸಂಬಂಧಗಳಿಗೆ ಒಂದು ಮೈಲಿಗಲ್ಲಾಗಿ ನಾನು ನೋಡುತ್ತೇನೆ ಎಂದಿದ್ದಾರೆ.

ಅವರು ರಾಜ್ ಘಾಟ್ ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಪುಷ್ಪನಮನ ಸಲ್ಲಿಸಿದರು. ಜೊತೆಗೆ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಅವರು ಫ್ರೆಡೆರಿಕ್ಸನ್ ಅವರನ್ನು ಭೇಟಿ ಮಾಡಿದ್ದಾರೆ.

ಮಾತುಕತೆಯ ಸಮಯದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಫ್ರೆಡೆರಿಕ್ಸನ್ ಅವರು ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದ್ದಾರೆ ಮತ್ತು ಹಸಿರು ಕಾರ್ಯತಂತ್ರದ ಪಾಲುದಾರಿಕೆಯ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಮಾತುಕತೆಯ ನಂತರ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ, ಭಾರತ ಮತ್ತು ಡೆನ್ಮಾರ್ಕ್ ಹಸಿರು ಕಾರ್ಯತಂತ್ರದ ಪಾಲುದಾರಿಕೆಯನ್ನು ಸ್ಥಾಪಿಸಿವೆ.

ತನ್ನ ಭೇಟಿಯ ಸಮಯದಲ್ಲಿ, ಫ್ರೆಡೆರಿಕ್ಸೆನ್ ಚಿಂತಕರ ಚಾವಡಿಗಳು, ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾರತ ಮತ್ತು ಡೆನ್ಮಾರ್ಕ್ ಬಲವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೊಂದಿವೆ. 200 ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಭಾರತದಲ್ಲಿವೆ ಮತ್ತು 60 ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಡೆನ್ಮಾರ್ಕ್‌ನಲ್ಲಿವೆ. ಈ ಭೇಟಿ ಭಾರತ ಮತ್ತು ಡೆನ್ಮಾರ್ಕ್ ನಡುವಿನ ನಿಕಟ ಮತ್ತು ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಡೆನ್ಮಾರ್ಕ್ ಪ್ರಧಾನಿ ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ.

Exit mobile version