ಜನನ ಪ್ರಮಾಣ ಪತ್ರ ಕಡ್ಡಾಯ: ಅಕ್ಟೋಬರ್ 1 ರಿಂದ ಜನನ, ಮರಣ ಮಾಹಿತಿಗೆ ಡಿಜಿಟಲ್‌ ಟಚ್‌

New Delhi: ದೇಶದಲ್ಲಿ ಅಕ್ಟೋಬರ್ (October) 1ರಿಂದ ದೇಶದಲ್ಲಿ ಜನನ ಮತ್ತು ಮರಣದ ಮಾಹಿತಿಗಳು ಡಿಜಟಲೀಕರಣಗೊಳ್ಳಲಿದ್ದು, ಈ ಎಲ್ಲದಕ್ಕೂ ಜನನ ಪ್ರಮಾಣ ಪತ್ರವೊಂದೇ ದಾಖಲೆ ಸಾಕಾಗಲಿದೆ. ಸಂಸತ್‌ನಲ್ಲಿ ಅಂಗೀಕಾರಗೊಂಡಿರುವ ಜನನ ಹಾಗೂ ಮರಣ ನೋಂದಣಿ (ತಿದ್ದುಪಡಿ) ಕಾಯಿದೆ-2023 ಪ್ರಕಾರ ಇನ್ನು ಮುಂದೆ ಜನನ ಹಾಗೂ ಮರಣದ ಮಾಹಿತಿ ಡಿಜಿಟಲ್‌ ದಾಖಲೆಯ ರೂಪ ಪಡೆದುಕೊಳ್ಳಲಿವೆ.

ಜನನ ಪ್ರಮಾಣ ಪತ್ರವನ್ನು ಸರ್ಕಾರದ ಅಧಿಸೂಚನೆಯಂತೆ ಬಹು ಉಪಯೋಗಿ ದಾಖಲೆಯಾಗಿ ಬಳಸಿಕೊಳ್ಳಬಹುದಾಗಿದ್ದು, ಶಾಲಾ ದಾಖಲಾತಿ, ವಾಹನ ಚಾಲನಾ ಪರವಾನಗಿ (ಡಿಎಲ್‌), ಸರ್ಕಾರಿ ಉದ್ಯೋಗ, ಪಾಸ್‌ಪೋರ್ಟ್‌ (Passport) , ಮತದಾರ ಪಟ್ಟಿಯಲ್ಲಿ ನೋಂದಣಿಗೆ ಜನನ ಪ್ರಮಾಣ ಪತ್ರ ಒಂದನ್ನೇ ಪ್ರಮುಖ ದಾಖಲೆಯಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ರಿಜಿಸ್ಟ್ರಾರ್‌ ಜನರಲ್‌ (Register General) ಹಾಗೂ ಜನಗಣತಿ ಆಯುಕ್ತ ಮೃತ್ಯುಂಜಯ ಕುಮಾರ್‌ ನಾರಾಯಣ ಅವರು ಅಕ್ಟೋಬರ್ 1 ರಿಂದ ಜಾರಿಗೆ ಬರುತ್ತಿರುವ ತಿದ್ದುಪಡಿ ಕಾಯಿದೆಯ ಸೆಪ್ಟೆಂಬರ್ 1ರ ಉಪ ವಿಭಾಗ (2) ಅಡಿಯಲ್ಲಿ ಜನನ ಹಾಗೂ ಮರಣದ ಅಂಶಗಳನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಡೇಟಾಬೇಸ್‌ನಲ್ಲಿ ಜನನ ಹಾಗೂ ಮರಣದ ಮಾಹಿತಿಯನ್ನು ಸೇರಿಸಲಾಗುತ್ತದೆ. ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ನೋಂದಣಿ ವ್ಯವಸ್ಥೆಯಡಿ ರಾಜ್ಯಗಳು ಜನನ ಹಾಗೂ ಮರಣದ ಮಾಹಿತಿಯನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ತಿಳಿಸಲಾಗಿದೆ.

ಇತ್ತೀಚಿಗಷ್ಟೇ ಅಂತ್ಯಗೊಂಡಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಜನನ, ಮರಣ ನೋಂದಣಿ (ತಿದ್ದುಪಡಿ) ವಿಧೇಯಕ-23 ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತ್ತು. ಸಂಸತ್‌ ಅಂಗೀಕರಿಸಿದ್ದ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಸಹಿ ಹಾಕಿದ್ದರು. ಅ. 1 ರಿಂದ ಕಾಯಿದೆಯಾಗಿ ದೇಶಾದ್ಯಂತ ಜಾರಿಗೆ ಬರುತ್ತಿದೆ.

ಕೋರ್ಟ್‌ ಕಡತಗಳಿಗೆ ತ್ವರಿತ ಮುಕ್ತಿ, ಡಿಜಿಟಲೀಕರಣಕ್ಕೆ ವೇಗ, ಕಾಲಮಿತಿಯೊಳಗೆ ಪ್ರಕರಣಗಳ ಇತ್ಯರ್ಥಕ್ಕೆ ಕೇಂದ್ರ ಸರ್ಕಾರವು ರೂಪಿಸಿರುವ ಇ- ಕೋರ್ಟ್‌ ಪರಿಕಲ್ಪನೆಯ ಮೂರನೇ ಹಂತದ ಇ- ಕೋರ್ಟ್‌ (E-Court) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕಾನೂನು ಸಚಿವಾಲಯ ಯೋಜನೆಯ ಉಸ್ತುವಾರಿ ಹೊತ್ತು ಹಣಕಾಸಿನ ನೆರವು ನೀಡುತ್ತಿದ್ದು, ತಂತ್ರಜ್ಞಾನವನ್ನು ಬಳಸಿಕೊಂಡು ನ್ಯಾಯದಾನ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಲು ಇ- ಕೋರ್ಟ್‌ ಸಹಕಾರಿಯಾಗಲಿದೆ. ಯೋಜನೆಯಡಿ ಕೋರ್ಟ್‌ ದಾಖಲೆಗಳ ಡಿಜಿಟಲೀಕರಣ, ಕಾಗದ ರಹಿತ ಕಾರ್ಯ ವಿಧಾನ ಮತ್ತು ಆನ್‌ಲೈನ್‌ ಕಲಾಪ, ಇ-ಫೈಲಿಂಗ್‌ (E-Filing) , ಇ-ಪಾವತಿಯನ್ನು ಸುಲಭಗೊಳಿಸುವ ಗುರಿ ಹೊಂದಿದೆ.

ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರು ಪ್ರಕರಣಗಳನ್ನು ನಿಗದಿಪಡಿಸುವಾಗ ಅಥವಾ ಆದ್ಯತೆ ನೀಡುವಾಗ ನ್ಯಾಯಾಧೀಶರು ಮತ್ತು ರಿಜಿಸ್ಟ್ರಾರ್‌ಗಳಿಗೆ ದತ್ತಾಂಶ ಆಧಾರಿತ ನಿರ್ಧಾರ ತೆಗೆದುಕೊಳ್ಳಲು ಸ್ಮಾರ್ಟ್‌ ವ್ಯವಸ್ಥೆಯಾಗಿ ಜಾರಿಗೆ ಬರಲಿದ್ದು, ಇದಕ್ಕಾಗಿ 7210 ಕೋಟಿ ರೂ. ಹಣ ನೀಡಲಾಗುವುದು ಎಂದು ಹೇಳಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version