ಪುಣೆಯಲ್ಲಿ PSI ನೇಮಕಾತಿ ಅಕ್ರಮ ಆರೋಪಿ ದಿವ್ಯಾ ಹಾಗರಗಿ ಬಂಧನ!

psi scam

ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಪಿಎಸ್‍ಐ(PSI) ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ದಿವ್ಯಾ ಹಾಗರಗಿಯನ್ನು(Divya Hagaragi) ಸಿಐಡಿ(CID) ತಂಡ ಪುಣೆಯ(Pune) ಹೊಟೇಲ್‍ವೊಂದರಲ್ಲಿ ಬಂಧಿಸಿದೆ.

ಪಿಎಸ್‍ಐ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆಯಾಗಿದ್ದಳು. ದಿವ್ಯಾ ಹಾಗರಗಿ ಬಿಜೆಪಿ ಮಹಿಳಾ ಘಟಕದಲ್ಲಿ ಗುರುತಿಸಿಕೊಂಡಿದ್ದರು, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಳು. ಬಿಜೆಪಿಯ ಹಲವು ಪ್ರಮುಖ ನಾಯಕರು ಸೇರಿದಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ದಿವ್ಯಾ ಹಾಗರಗಿ ಇರುವ ಪೋಟೋ ಕೂಡಾ ಎಲ್ಲೆಡೆ ವೈರಲ್ ಆಗಿತ್ತು.

ದಿವ್ಯಾ ಹಾಗರಗಿ ಪಿಎಸ್‍ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ಹೊರಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದಳು. ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಿದರು ಉತ್ತರಿಸಿರಲಿಲ್ಲ. ಹೀಗಾಗಿ ಸಿಐಡಿ ಪೊಲೀಸರ ಮುಂದೆ ಶರಣಾಗದಿದ್ದರೆ, ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿತ್ತು. ಆದರು ದಿವ್ಯಾ ಹಾಗರಗಿ ಪೊಲೀಸರಿಗೆ ಶರಣಾಗಿರಲಿಲ್ಲ.

ಇನ್ನು ದಿವ್ಯಾ ಹಾಗರಗಿಯನ್ನು ಪತ್ತೆ ಹಚ್ಚಲು ಸಿಐಡಿ ಎಸ್‍ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ತೀವ್ರ ಹುಡುಕಾಟದ ನಂತರ ಮಹಾರಾಷ್ಟ್ರದ ಹೊಟೇಲ್‍ವೊಂದರಲ್ಲಿ ದಿವ್ಯಾ ಹಾಗರಗಿ ಇರುವ ಮಾಹಿತಿಯನ್ನು ಸಿಐಡಿ ತಂಡ ಕಲೆಹಾಕಿತ್ತು. ಸಿಐಡಿ ಎಸ್‍ಪಿ ರಾಘವೇಂದ್ರ ಹೆಗಡೆ, ಡಿವೈಎಸ್‍ಪಿ ಪ್ರಕಾಶ್ ರಾಠೋಡ್, ಡಿವೈಎಸ್‍ಪಿ ಶಂಕರ್‍ಗೌಡ ನೇತೃತ್ವದ ತಂಡ ಹೊಟೇಲ್ ಬಳಿಯೇ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದಾರೆ.

ಇನ್ನೊರ್ವ ಆರೋಪಿಯಾಗಿದ್ದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಅರ್ಚನಾರನ್ನು ಇದೇ ವೇಳೆ ಬಂಧಿಸಲಾಗಿದೆ. ಈ ಇಬ್ಬರು ಜೊತೆಯಾಗಿ ಹೊಟೇಲ್‍ನಲ್ಲಿ ತಂಗಿದ್ದರು. ಇನ್ನು ಇತ್ತೀಚೆಗೆ ಈ ಅಕ್ರಮದ ಪ್ರಮುಖ ಆರೋಪಿಯಾಗಿದ್ದ ಅಫಜಲಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಸಹೋದರ ಆರ್.ಡಿ ಪಾಟೀಲ್‍ನನ್ನು ವಶಕ್ಕೆ ಪಡೆಯಲಾಗಿತ್ತು.

Exit mobile version