‘ಮಸುಕಾ’ಗಿದ್ದ ಅನುಮಾನ ಈಗ ತೀಕ್ಷ್ಣ – EVM ಬಗ್ಗೆ ಡಿಕೆಶಿ ಅನುಮಾನ

Bengaluru: ‘ಮಸುಕಾ’ಗಿದ್ದ ಅನುಮಾನ ಈಗ ತೀಕ್ಷ್ಣವಾಗಿದ್ದು, ತಂತ್ರಜ್ಞಾನ ನಿಪುಣ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಎಲಾನ್ ಮಸ್ಕ್ ಅವರೇ ಇವಿಎಂ (EVM)ಗಳ ಮೇಲೆ ವ್ಯಕ್ತಪಡಿಸಿರುವ ಅನುಮಾನವು ಭಾರತದಲ್ಲಿ ನಡೆದ ಮತದಾನ ಪ್ರಕ್ರಿಯೆಗಳ ಬಗ್ಗೆ ಆತಂಕ ಮೂಡಿಸಿದೆ.

ಚುನಾವಣೆಯ ನಂತರ ದೇಶದ ಕೆಲವೆಡೆ ನಡೆಯುತ್ತಿರುವ ಘಟನೆಗಳಿಗೂ ಮಸ್ಕ್ ಅವರ ಹೇಳಿಕೆಗೂ ತಾಳೆಯಾಗುತ್ತಿದೆ. ಚುನಾವಣೆ ವ್ಯವಸ್ಥೆಯೇ ಪಾರದರ್ಶಕವಾಗಿರದಿದ್ದರೆ ಜನಾದೇಶ ಯಾರ ಕಡೆ ಇದೆ ಎಂದು ತಿಳಿಯುವುದಾದರೂ ಹೇಗೆ? ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಈಗ ಪ್ರಪಂಚಕ್ಕೇ ಅರ್ಥವಾಗಿದೆ. ಭಾರತಕ್ಕೂ ಆ ಕಾಲ ಸನ್ನಿಹಿತವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D K Shivakumar) ಅವರು EVM ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಎಲಾನ್ ಮಸ್ಕ್ (Elan Musk) ಇವಿಎಂ ಬಗ್ಗೆ ಹೇಳಿಕೆ ನೀಡಿದ ನಂತರ ದೇಶಾದ್ಯಂತ ಇಂಡಿ ಮೈತ್ರಿಕೂಟದ ನಾಯಕರು ಇವಿಎಂ ವ್ಯವಸ್ಥೆಯ ಬಗ್ಗೆ ಅಪಸ್ವರ ಎತ್ತಿದ್ದು, ಇವಿಎಂ ವಿಚಾರದಲ್ಲಿ ಎಲಾನ್ ಮಸ್ಕ್ ಅವರ ಮಾತುಗಳು ಸಕಾರಣವಾದುದು, ತಾಂತ್ರಿಕ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಗಮನ ಸೆಳೆದಿರುವ ಅವರ ಅಭಿಪ್ರಾಯಗಳು ವಿಶ್ಲೇಷಣಾರ್ಹವೇ ಹೊರತು ಟೀಕೆ ಮಾಡುವುದಲ್ಲ, ಅವರ ಮಾತುಗಳನ್ನು ಗಡಿಬಿಡಿಯಲ್ಲಿ ತಳ್ಳಿ ಹಾಕಲು ಯತ್ನಿಸುತ್ತಿರುವ ಬಿಜೆಪಿ ಬಾಲಿಶವಾಗಿ ನಡೆದುಕೊಳ್ಳುತ್ತಿದೆ.

ಇವಿಎಂ ಅಕ್ರಮದ ಪ್ರಶ್ನೆ ಬಂದಾಗಲೆಲ್ಲ ಚುನಾವಣಾ ಆಯೋಗ ಹಾವು ತುಳಿದಂತೆ ಆಡುವುದೇಕೆ? ಮಹಾರಾಷ್ಟ್ರದಲ್ಲಿನ ಇವಿಎಂ ಹ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆ ಮಾಡುವ ಮೊದಲೇ ತುರಾತುರಿಯಲ್ಲಿ ನಿರಾಕರಿಸಲು ಬಂದಿರುವುದೇಕೆ? ಇವಿಎಂ ಅಕ್ರಮದ ಬಗ್ಗೆ ಆಯೋಗ ಮುಕ್ತ ಮನಸಿನಿಂದ ಪಾರದರ್ಶಕವಾಗಿ ನಡೆದುಕೊಳ್ಳಲು ಹಿಂದೇಟು ಹಾಕುವುದೇಕೆ? ಎಂದು ಕಾಂಗ್ರೆಸ್ (Congress) ಪ್ರಶ್ನಿಸಿದೆ.

ಜಗತ್ತಿನ ಯಾವ ಮುಂದುವರೆದ ರಾಷ್ಟ್ರಗಳೂ ಚುನಾವಣೆಗೆ ಇವಿಎಂ ಯಂತ್ರಗಳನ್ನು ಬಳಸುತ್ತಿಲ್ಲ. ತಾಂತ್ರಿಕತೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್ (Japan) ಕೂಡ ಇವಿಎಂ ಬಳಕೆಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಕಂಡುಕೊಂಡು 2018ರಿಂದ ಇವಿಎಂ ಬಳಕೆಯನ್ನು ಸ್ಥಗಿತಗೊಳಿಸಿದೆ. ಜಗತ್ತಿನ ತಂತ್ರಜ್ಞಾನದ ದಿಗ್ಗಜರೆಲ್ಲ ಇವಿಎಂ ಬಳಕೆಯಲ್ಲಿ ಭ್ರಷ್ಟಾಚಾರ ಸಾಧ್ಯ ಎನ್ನುವುದನ್ನು ಪ್ರತಿಪಾಧಿಸಿದ್ದಾರೆ. ಹೀಗಿದ್ದೂ ಬಿಜೆಪಿ (BJP) ಹಾಗೂ ಚುನಾವಣಾ ಆಯೋಗ ಇವಿಎಂ ಪರ ವಕಾಲತ್ತು ವಹಿಸುವುದು ನೋಡಿದರೆ ಇದರಲ್ಲಿ ಬಿಜೆಪಿಗೆ ಲಾಭ ಇಲ್ಲದಿರಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

Exit mobile version