ಅಕ್ರಮ ಗಣಿಗಾರಿಕೆ ಇದ್ದರೆ ಸಕ್ರಮ ಮಾಡಿಕೊಳ್ಳಿ: ಸಿಎಂ ಯಡಿಯೂರಪ್ಪ

ಮೈಸೂರು, ಜ. 23: “ಗಣಿಗಾರಿಕೆ ಅಕ್ರಮವಾಗಿದ್ದರೆ‌ ಅರ್ಜಿ ಕೊಟ್ಟು ಸಕ್ರಮ ಮಾಡಿಸಿಕೊಳ್ಳಿ”, ಹೀಗೆಂದು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಮುಕ್ತ ಆಹ್ವಾನ ನೀಡಿದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಹೌದು, ನಿನ್ನೆ ರಾತ್ರಿ ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಪೋಟ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತಂತೆ ಚರ್ಚೆಗಳು ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ‌ಮೈಸೂರಿನಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಗಣಿಗಾರಿಕೆ
ಅಕ್ರಮವಾಗಿದ್ದರೆ ಅರ್ಜಿ ಕೊಟ್ಟು ಸಕ್ರಮ ಮಾಡಿಸಿಕೊಳ್ಳಿ ಎಂದು ಆಹ್ವಾನ ‌ನೀಡಿದ್ದಾರೆ.

ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಕಾಮಗಾರಿಗಳು ಅಪಾರ ಪ್ರಮಾಣದಲ್ಲಿ ನಡೆಯುತ್ತಿವೆ. ಹೀಗಾಗಿ ಕಲ್ಲು ಗಣಿಗಾರಿಕೆ‌ ಅಗತ್ಯವಿದೆ. ಆದರೆ ಅನುಮತಿ ಪಡೆದು ಗಣಿಗಾರಿಕೆ ಮಾಡಿಲು ಅಭ್ಯಂತರ ಇಲ್ಲ. ಆದರೆ ಅಕ್ರಮವಾಗಿ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಈ ಸಂಬಂಧ ಪರಿಶೀಲಿಸಿ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಶಿವಮೊಗ್ಗದಲ್ಲಿ ಸ್ಪೋಟದಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದೇವೆ. ಮನೆಗಳಿಗೂ ಹಾನಿಯಾಗಿದೆ ಅಂತ ಗೊತ್ತಾಗಿದೆ‌. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು‌ ಮಾಹಿತಿ ನೀಡಿದರು.

ಇದೇ ವೇಳೆ ರಾಜ್ಯ ‌ಬಜೆಟ್ ಕುರಿತು ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಸಂಪನ್ಮೂಲ ಕೊರತೆ ಉಂಟಾಗಿದೆ. ಹೀಗಾಗಿ ಸಹಜವಾಗಿಯೇ ಬಜೆಟ್ ಗಾತ್ರ ಕಳೆದ ಬಾರಿಗಿಂತ ಕಡಿಮೆ ಇರಲಿದೆ. ಆದ್ದರಿಂದ ಈ ಬಾರಿ ಬಜೆಟ್ ಕೊರತೆ ಮಂಡಿಸಲಾಗುತ್ತದೆ. ಕಳೆದ ಬಾರಿ 2 ಲಕ್ಷ 37 ಸಾವಿರ ಕೋಟಿ ರೂ.ಬಜೆಟ್ ಗಾತ್ರವಿತ್ತು. ಈ ಬಾರಿ ಆ ಗಾತ್ರದ ಬಜೆಟ್ ಇರಲ್ಲ.

ರಾಜ್ಯದಲ್ಲಿ ಶೇ 90ರಷ್ಟು ಕೋವಿಡ್ ನಿಯಂತ್ರಣದಲ್ಲಿದೆ. ಕೋವಿಡ್ ಬೇಕಾಗಿರುವಷ್ಟು ಹಣಕಾಸು ನೆರವನ್ನು ಸರಕಾರ ಪೂರೈಸುತ್ತದೆ.

ಇದೇ ವೇಳೆ‌ ಮೈಸೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಕ್ಕಮಹಾದೇವಿ ಕಂಚಿನ ಪ್ರತಿಮೆಯನ್ನು ಸಿಎಂ ಅನಾವರಣಗೊಳಿಸಿದರು.‌ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಂಚಿನ‌ ಪ್ರತಿಮೆ ರಾಜ್ಯದಲ್ಲಿ ನಿರ್ಮಿಸಿರುವ ಮೊದಲ ಕಂಚಿನ ಪ್ರತಿಮೆಯಾಗಿದೆ.

Exit mobile version