ಕೋವಿಡ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ: ಕೇಂದ್ರ ಎಚ್ಚರಿಕೆ

ನವದೆಹಲಿ, ಮೇ. 27: ಕೊರೋನಾ ನಿಯಂತ್ರಣಕ್ಕೆ ತರಲು ಸದ್ಯ ಇರುವ ಒಂದು ಮಾರ್ಗವೆಂದರೆ ಲಸಿಕೆ​(ವ್ಯಾಕ್ಸಿನೇಷನ್). ಕೊರೊನಾ ಸೋಂಕಿನ ಆರ್ಭಟ ತಣಿಸಲು ಸರ್ಕಾರ, ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿಕೊಳ್ಳುತ್ತಿದೆ. ಲಸಿಕೆ ಪಡೆದ ಮೇಲೆ ಈ ಕುರಿತಾಗಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಲಸಿಕೆ ಪಡೆದ ಬಳಿಕ ಇನ್ನಿತರರಿಗೆ ಸ್ಪೂರ್ತಿಯಾಗಲು, ಹೆಚ್ಚಿನ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಮಾಣಪತ್ರವನ್ನು ಪೋಸ್ಟ್​ ಮಾಡಲಾಗುತ್ತಿದೆ. ಈ ಹಿಂದೆ ಕೆಲವು ನಟ-ನಟಿಯರು ವ್ಯಾಕ್ಸಿನೇಷನ್​ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಬಳಿಕ ಜನಸಾಮಾನ್ಯರೂ ಕೂಡಾ ಲಸಿಕೆ ಪಡೆದ ಪ್ರಮಾಣಪತ್ರವನ್ನು ಪೋಸ್ಟ್​ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದರು. ಪ್ರಮಾಣ ಪತ್ರದಲ್ಲಿ ಕೆಲವು ನಿರ್ಣಾಯಕ ಡೇಟಾಗಳಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರಿಂದ ಅಪಾಯ ಹೆಚ್ಚು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಲಸಿಕೆ ಪಡೆದವರ ಹೆಸರು ಜತೆಗೆ ಕೆಲ ವಿವರಗಳನ್ನು ಲಸಿಕೆ ಪ್ರಮಾಣಪತ್ರ ಒಳಗೊಂಡಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿವರವನ್ನು ಪೋಸ್ಟ್​ ಮಾಡುವುದು ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಗೃಹ ಸಚಿವಾಲಯ ಟ್ವೀಟ್​ ಮೂಲಕ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುವುದರಿಂದಾಗಿ ಈ ಕುರಿತಾಗಿ ಎಚ್ಚರವಹಿಸಿ ಎಂದು ಸೂಚನೆ ನೀಡಿದೆ.

Exit mobile version