ದ್ವಿತೀಯ ಟೆಸ್ಟ್: ಸೋಲಿನ ಸುಳಿಯಲ್ಲಿ ಆಸೀಸ್

ಮೆಲ್ಬೋರ್ನ್, ಡಿ. 28: ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಅಂಗಳದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನವೂ ಟೀಂ ಇಂಡಿಯಾ ಪ್ರಾಬಲ್ಯ ಮುಂದುವರಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಭಾರತ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.‌

ನಾಯಕ ಅಜಿಂಕ್ಯಾ ರಹಾನೆ(112) ಹಾಗೂ ರವೀಂದ್ರ ‌ಜಡೇಜಾ(57) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿತು. ಇವರಿಬ್ಬರ ‌ನಿರ್ಗಮನದ ಬಳಿಕ ಕಣಕ್ಕಿಳಿದ ಅಶ್ವಿನ್(14), ಉಮೇಶ್ ಯಾದವ್(9) ಹಾಗೂ ಬುಮ್ರಾ(0) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಪರಿಣಾಮ ‌ಟೀಂ ಇಂಡಿಯಾ 326 ರನ್‌ಗಳಿಗೆ ‌ಆಲೌಟ್ ಆಗುವ ಮೂಲಕ ಪ್ರಥಮ ಇನ್ನಿಂಗ್ಸ್‌ನಲ್ಲಿ 131 ರನ್‌ಗಳ ಭರ್ಜರಿ ‌ಮುನ್ನಡೆ ಪಡೆಯಿತು. ಆಸ್ಟ್ರೇಲಿಯಾ ಪರ‌ ಸ್ಟಾರ್ಕ್ ಹಾಗೂ ಲಿಯಾನ್ ತಲಾ 3 ವಿಕೆಟ್ ‌ಪಡೆದರೆ. ಕಮಿನ್ಸ್ 2, ಹೆಜಲ್ವುಡ್ 1 ವಿಕೆಟ್ ‌ಪಡೆದುಕೊಂಡರು.

ಆಸೀಸ್ ‌ಬ್ಯಾಟಿಂಗ್ ವೈಫಲ್ಯ:
ಭಾರತ ನೀಡಿದ‌ 131 ರನ್‌ಗಳ ‌ಇನ್ನಿಂಗ್ಸ್ ಮುನ್ನಡೆಯ ಮೊತ್ತವನ್ನು ಬೆನ್ನತ್ತಿದ‌ ಆಸ್ಟ್ರೇಲಿಯಾ ‌ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಬರ್ನ್ಸ್(4) ಮತ್ತೊಮ್ಮೆ ‌ಮುಗ್ಗರಿಸಿದರು. ನಂತರ ಜೊತೆಯಾದ ಮ್ಯಾಥ್ಯೂ ವೇಡ್(40), ಮಾರ್ನಸ್ ಲಬುಸ್ಚಗ್ನೆ(28) ಕೊಂಚ ಪ್ರತಿರೋಧ ತೋರಿದರು. ನಂತರ ಕಣಕ್ಕಿಳಿದ ಸ್ಟೀವ್ ಸ್ಮಿತ್(8), ಟ್ರಾವಿಸ್ ‌ಹೆಡ್(17) ಹಾಗೂ ‌ನಾಯಕ ಟಿಮ್‌ ಪೈನ್(1) ನಿರೀಕ್ಷಿತ ಆಟವಾಡಲು ವಿಫಲರಾದರು. ಈ ಹಂತದಲ್ಲಿ 7ನೇ‌ ವಿಕೆಟ್‌ಗೆ
ಜೊತೆಯಾದ ಕೆಮರೂನ್ ಗ್ರೀನ್(17) ಹಾಗೂ ‌ಪ್ಯಾಟ್‌ ಕಮಿನ್ಸ್(15) ಮುರಿಯದ 34 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಪರಿಣಾಮ 3ನೇ ದಿನದಂತ್ಯಕ್ಕೆ 6 ‌ವಿಕೆಟ್‌ ಕಳೆದುಕೊಂಡು 133 ರನ್‌ಗಳಿಸಿರುವ ಆಸ್ಟ್ರೇಲಿಯಾ, ಕೇವಲ 2 ರನ್‌ಗಳ ‌ಮುನ್ನಡೆ‌ ಸಾಧಿಸಿದೆ. ಭಾರತದ ಪರ ರವೀಂದ್ರ ಜಡೇಜಾ 2 ವಿಕೆಟ್ ‌ಪಡೆದರೆ. ಬುಮ್ರಾ, ಅಶ್ವಿನ್, ಯಾದವ್ ‌ಹಾಗೂ ಸಿರಾಜ್ ತಲಾ 1 ವಿಕೆಟ್ ‌ಪಡೆಯುವ ಮೂಲಕ ‌ತಂಡಕ್ಕೆ ನೆರವಾದರು.

Exit mobile version