ಅಲ್ಪಸಂಖ್ಯಾತರ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ನಿಷೇಧಕ್ಕೆ ಕ್ರಮ : ಬಿ.ಸಿ ನಾಗೇಶ್!

bc nagesh

ಅಲ್ಪಸಂಖ್ಯಾತರ ಶಾಲೆಗಳಲ್ಲಿ ಧಾರ್ಮಿಕ ಗ್ರಂಥಗಳ ಬೋಧನೆಯನ್ನು ನಿಷೇಧಿಸಲಾಗುವುದು. ಎಲ್ಲ ಧರ್ಮದ ಮಕ್ಕಳು ಓದುವ ಶಾಲೆಗಳಲ್ಲಿ ಕೇವಲ ಒಂದು ಧರ್ಮದ ಬೋಧನೆ ಮಾಡುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ(Education Minister) ನಾಗೇಶ್(BC Nagesh) ತಿಳಿಸಿದ್ದಾರೆ.

ಬೆಂಗಳೂರಿನ(Bengaluru) ಕ್ಲಾರೆನ್ಸ್(Clarence) ಪ್ರೌಡಶಾಲೆಯಲ್ಲಿ ಬೈಬಲ್(Bible) ಬೋಧನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ರೀತಿಯ ಘಟನೆಗಳು ಅನೇಕ ಕಡೆ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಶಾಲೆಗಳಲ್ಲಿ ಧಾರ್ಮಿಕ ಬೋಧನೆ ನಮ್ಮ ಶೈಕ್ಷಣಿಕ ನೀತಿಗಳಿಗೆ ವಿರುದ್ದವಾಗಿದೆ. ಹೀಗಾಗಿ ಎಲ್ಲ ಅಲ್ಪಸಂಖ್ಯಾತ ಶಾಲೆಗಳ ಪಠ್ಯಪುಸ್ತಕಗಳನ್ನು ಪರಿಶೀಲಿಸುವಂತೆ ಬಿಇಒಗಳಿಗೆ ಸೂಚನೆ ನೀಡಿದ್ದೇವೆ. ಧಾರ್ಮಿಕ ಬೋಧನೆಯಲ್ಲಿ ತೊಡಗಿರುವ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಇನ್ನು ಅಲ್ಪಸಂಖ್ಯಾತರ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡುತ್ತಿರುವುದನ್ನು ಖಂಡಿಸಬೇಕಾದ ಬುದ್ದಿಜೀವಿಗಳು ಈಗ ಮಾಯವಾಗಿದ್ದಾರೆ. ಕೆಲವು ಆಯ್ದ ವಿಷಯಗಳ ಬಗ್ಗೆ ಮಾತ್ರ ಅವರು ಮಾತನಾಡುತ್ತಾರೆ. ಸಮಾನತೆ, ಜಾತ್ಯಾತೀತತೆ, ಸಂವಿಧಾನ ಎಂದು ಭಾಷಣ ಮಾಡುವ ಜಾತ್ಯಾತೀತವಾದಿಗಳೆಲ್ಲಾ ಈ ಘಟನೆಯನ್ನು ಖಂಡಿಸುವುದಿಲ್ಲ. ಇಂತಹ ಘಟನೆಗಳ ಕುರಿತು ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನು ಬೆಂಗಳೂರಿನ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಕೈಸ್ತ್ರ ಧರ್ಮಗ್ರಂಥ ಬೈಬಲ್ ಬೋಧಿಸಲು ಅನುಮತಿ ಪಡೆಯಲು, ಶಾಲಾ ಪ್ರವೇಶ ಅರ್ಜಿಯಲ್ಲಿ ಒಪ್ಪಿಗೆ ಸೂಚಿಸುವಂತೆ ಕೇಳಲಾಗಿತ್ತು. ಶಾಲೆಯ ಈ ಕ್ರಮವನ್ನು ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಎಲ್ಲ ಧರ್ಮದ ಮಕ್ಕಳು ಓದುವ ಶಾಲೆಯಲ್ಲಿ ಕೈಸ್ತ್ರ ಮತಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದವು. ಶಿಕ್ಷಣ ಸಚಿವ ನಾಗೇಶ್ ಅವರನ್ನು ಭೇಟಿಯಾಗಿ ಶಾಲೆಯ ಮಾನ್ಯತೆ ರದ್ದು ಮಾಡುವಂತೆ ಮನವಿ ಮಾಡಲಾಗಿತ್ತು.

ಇದೀಗ ಶಿಕ್ಷಣ ಇಲಾಖೆ ಕ್ಲಾರೆನ್ಸ್ ಪ್ರೌಢಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ಸಮಗ್ರ ವರದಿ ನೀಡುವಂತೆಯೂ ಸೂಚಿಸಿದೆ.

Exit mobile version