ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಪತ್ತೆ ಪ್ರಕರಣ ; ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್

ಮುಂಬೈ, ಮಾ. 15: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಹೊತ್ತಿದ್ದ ಕಾರು ಸಿಕ್ಕ ಪ್ರಕರಣದಲ್ಲಿ ಎನ್​ಐಎ ದಳದಿಂದ ಬಂಧಿಸಲ್ಪಟ್ಟಿದ್ದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮುಂಬೈ ಸ್ಪೆಷಲ್ ಬ್ರ್ಯಾಂಚ್​ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸಚಿನ್ ವಾಜೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸ್ಫೋಟಕ ಇಟ್ಟಿದ್ದ ತಂಡದಲ್ಲಿ ಸಚಿನ್ ವಾಜೆ ಕೂಡ ಭಾಗಿಯಾಗಿದ್ದು ಈ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.

ಫೆಬ್ರವರಿ 25ರಂದು ದಕ್ಷಿಣ ಮುಂಬೈನ ಕಾರ್ಮಿಚೇಲ್ ರಸ್ತೆಯಲ್ಲಿರುವ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿರುವ ಕಾರೊಂದು ಪತ್ತೆಯಾಗಿತ್ತು. ಈ ಕಾರಿನೊಳಗೆ ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿಡಲಾಗಿತ್ತು. ಅದೃಷ್ಟವಶಾತ್ ಜಿಲೆಟಿನ್ ಸ್ಫೋಟಗೊಳ್ಳದ ಕಾರಣ ಭಾರಿ ಅನಾಹುತ ತಪ್ಪಿತ್ತು. ಎನ್​ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ಸಚಿನ್ ವಾಜೆ, ಅಂಬಾನಿ ಮನೆ ಬಳಿ ಪತ್ತೆಯಾದ ವಾಹನದಲ್ಲಿ ಸ್ಫೋಟಕ ಇರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ ಮಹೇಂದ್ರಾ ಸ್ಕಾರ್ಪಿಯೋ ಕಾರನ್ನು ನಿರ್ವಹಿಸುತ್ತಿದ್ದ ಮನ್​ಸುಖ್ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಹಿಂದೆ ಸಚಿನ್ ವಾಜೆ ಅವರ ಕೈವಾಡ ಇದೆ ಎಂದು ಮನ್​ಸುಖ್ ಪತ್ನಿ ಆರೋಪಿಸಿದ್ದರು. ಈ ಆರೋಪ ಕೇಳಿ ಬಂದ ಮೇಲೆ ಘಟನೆಯ ತನಿಖೆಯ ಹೊಣೆ ಹೊತ್ತಿದ್ದ ವಾಜೆ ಅವರನ್ನು ತನಿಖಾ ತಂಡದಿಂದ ಕೈಬಿಡಲಾಗಿತ್ತು. ಶನಿವಾರ ವಜೆ ಅವರನ್ನು ಎನ್​ಐಎ ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿ ರಾತ್ರಿ 11.50ಕ್ಕೆ ಅರೆಸ್ಟ್ ಮಾಡಿದೆ.

Exit mobile version