ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಸುಳ್ಳು ಮಾಹಿತಿ; ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಕಿಡಿ

ಮೈಸೂರು, ಮೇ. 31: ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ಸಾ.ರಾ. ಮಹೇಶ್, ಕೊರೊನಾ ಆತಂಕಕ್ಕೆ ಸಿಲುಕಿರುವ ಮೈಸೂರಿನಲ್ಲಿ ಸೋಂಕಿನಿಂದ ಬಲಿಯಾದವರ ಸಂಖ್ಯೆ ಮುಚ್ಚಿಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ನೋಡಿ ನನಗೆ ಆಘಾತವಾಗುತ್ತಿದೆ. ಮೈಸೂರು ನಗರ ವ್ಯಾಪ್ತಿಯಲ್ಲಿ ಮೇ1 ರಿಂದ ಮೇ29 ರವರೆಗೆ 969 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕ ಕೊಟ್ಟಿದ್ದು, 731 ಸಾವುಗಳ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದು ಆರೋಪಿಸಿದ ಅವರು, ಈ ಸಂಬಂಧ ದಾಖಲೆ ಬಿಡುಗಡೆ ಮಾಡಿದರು.

ಅಲ್ಲದೇ, ಕೊರೊನಾ ಸೋಂಕಿನಿಂದ ಬಲಿಯಾದವರ ಕುರಿತು ಅಂತ್ಯಕ್ರಿಯೆ ಸ್ಥಳದಿಂದ ಪ್ರತಿದಿನ ದಾಖಲಾತಿ ತರಲಾಗಿದೆ. ನಗರದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಗೆ ಸಂಬಂಧಿಸಿದಂತೆ ಸರ್ಕಾರಕ್ಕೂ ವಂಚನೆ ಮಾಡಲಾಗಿದೆ. ಪ್ರತಾಪಸಿಂಹ ಸಹ ಸಾವಿನ ಲೆಕ್ಕದ ಬಗ್ಗೆ ಹೇಳಿದ್ದರು. ಆದರೆ ನಾನು ಹೇಳುತ್ತಿಲ್ಲ ದಾಖಲೆ ಸಹ ನೀಡಿದ್ದೇನೆ. ಹೀಗಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿಲ್ಲ, ಬದಲಿಗೆ ಇದು ಮೋಸದ ಲೆಕ್ಕ ಎಂದು ಕಿಡಿಕಾರಿದರು.

ನಿನ್ನೆಯೂ ಸಹ ಸಾವಿನ ಲೆಕ್ಕದಲ್ಲಿ ತಪ್ಪು ಕೊಡಲಾಗಿದ್ದು, ನನ್ನ ಕ್ಷೇತ್ರ ಕೆ.ಆರ್. ನಗರದಲ್ಲೂ ಸುಳ್ಳು ಲೆಕ್ಕ ಕೊಡಲಾಗುತ್ತಿದೆ. ನಿನ್ನೆ ಕೆ.ಆರ್.ನಗರದಲ್ಲಿ ಯಾರು ಸಾತ್ತಿಲ್ಲ ಎಂದು ಲೆಕ್ಕ ನೀಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಸಾವು ಇಳಿಸಿದ್ದೇನೆ, ಸಾಧನೆ ಮಾಡಿದ್ದೇನೆ ಅಂತಾ ಪೋಸು ಕೊಡಲು ಈ ರೀತಿ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ ಅವರು, ಸರ್ಕಾರ ಈಗಲಾದರೂ ಕಣ್ಣು ತೆರೆಯಿರಿ, ಸಿಎಸ್, ರಾಜ್ಯಪಾಲರು ಇದನ್ನು ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ನಿಮ್ಮ ಮೋಸದ ಅಂಕಿ ಅಂಶಗಳ ಪ್ರಕಾರ ರಾಜ್ಯ ದೇಶದ ಕಾನೂನನ್ನ ವಂಚಿಸಲಾಗಿದೆ. ಇದು ಸತ್ತಂತಹ ಕುಟುಂಬಗಳಿಗೆ ದ್ರೋಹ ಮಾಡಿ ಮಾಡಿರುವ ಇಳಿಕೆ ಸಾಧನೆ. ವೈದ್ಯರು ಸುಳ್ಳಾ..? ಅಥವಾ ಅಂತ್ಯಕ್ರಿಯೆ ಮಾಡಿದ್ದು ಸುಳ್ಳಾ? ಜನರು ಭಯ ಬೀಳುತ್ತಾರೆ ಅಂತಾ ಮಾಧ್ಯಮಗಳಿಗೆ ಕಡಿಮೆ ಕೊಡಬಹುದೇನೋ. ಆದರೆ ಇವರು ಸರ್ಕಾರಕ್ಕೆ ಕಡಿಮೆ ಲೆಕ್ಕ ಕೊಟ್ಟಿದ್ದಾರೆ. ಜನರು ಜಾಗೃತರಾಗಿರುವುದು ಮಾಧ್ಯಮಗಳ ವರದಿಯಿಂದ ಜಿಲ್ಲಾಡಳಿತದ ಕ್ರಮದಿಂದಲ್ಲ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಇವರು ಮಂಡ್ಯದಲ್ಲಿದ್ದಾಗ ಕೇಳಿದ್ದೆ, ಹಾಸನದಲ್ಲಿದ್ದಾಗ ನೋಡಿದ್ದೆ. ಇವರು ಮೈಸೂರಿಗೆ ಸೂಕ್ತ ಅಲ್ಲ ಅಂತಾ ಹೇಳಿದ್ದೆ. ಆದರೆ ಪ್ರತಾಪ ಸಿಂಹ ಸಮರ್ಥಿಸಿಕೊಂಡಿದ್ದರು, ಇದೀಗ ಅವರಿಗೆ ತಡವಾಗಿ ಅರ್ಥವಾಗಿದೆ. ರೋಹಿಣಿ ಸಿಂಧೂರಿ ಬೇರೆಯವರ ಮೇಲೆ ಹಾಕುವುದರಲ್ಲಿ ಎಕ್ಸ್ಪರ್ಟ್ ಎಂದು ಟೀಕಿಸಿದರು.

ಈ ರೀತಿ ಲೆಕ್ಕ ಕೊಡೋಕೆ ಐಎಎಸ್ ಏಕೆ ಬೇಕು? ಎಸ್.ಎಸ್.ಎಲ್.ಸಿ ಓದಿದವರು ಕೊಡಬಹುದು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಸಾರ್ವಜನಿಕ ಸೇವೆಯ ಎಲ್ಲವೂ ಇದೇ ರೀತಿ ಮೋಸದ್ದಾಗಿದೆ. ರಾಜ್ಯ ಸರ್ಕಾರ ಸಿಎಂ ರಾಜ್ಯಪಾಲರು ಸತ್ತವರ ಕುಟುಂಬಕ್ಕೆ ಸತ್ತವರ ಆತ್ಮಕ್ಕೆ ತಪ್ಪು ಲೆಕ್ಕ ಕೊಟ್ಟಿದ್ದಾರೆ. ಒಳ್ಳೆಯದು ಮಾಡಿದೆಲ್ಲಾ ನಂದು ಇದು ಯಾರದು..? ಎಂದು ಪ್ರಶ್ನಿಸಿದ ಅವರು, ಸಾವಿನ ಲೆಕ್ಕದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

Exit mobile version