ಕೃಷಿ ಕಾಯ್ದೆ ಹೋರಾಟಕ್ಕೆ ರೈತರು ಬಲಿಯಾಗಿಲ್ಲ – ನರೇಂದ್ರ ಸಿಂಗ್ ತೋಮರ್

ನವದೆಹಲಿ ಡಿ 11 :  ಪೊಲೀಸರ ಕ್ರಮದಿಂದ ಕೃಷಿ ಕಾಯ್ದೆ ಹೋರಾಟದಲ್ಲಿ ಪಾಲ್ಗೊಂಡ ರೈತರು ಸಾವನ್ನಪ್ಪಿಲ್ಲವೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್(Narendra Singh Tomar) ಹೇಳಿದ್ದಾರೆ. ಚಳಿಗಾಲದ ಅಧಿವೇಶನ(Winter Session)ದಲ್ಲಿ ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರು ಕೇಳಿದ ಜಂಟಿ ಪ್ರಶ್ನೆಗೆ ತೋಮರ್ ಈ ರೀತಿ ಉತ್ತರಿಸಿದ್ದಾರೆ.

ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸಿದ್ದರು. ‘ಅನ್ನದಾತ’ರ ಪ್ರತಿಭಟನೆಗೆ ಕೊನೆಗೂ ಮಣಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 3 ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸುಮಾರು 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದರು.

ಶುಕ್ರವಾರ ಈ ಬಗ್ಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ರೈತ ಚಳವಳಿ(Farmers Protes)ಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ವಿಷಯವು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದೆ. ರೈತರ ಧರಣಿ ವೇಳೆ ಪೊಲೀಸರ ಕ್ರಮದಿಂದ ಯಾವುದೇ ರೈತ ಸಾವನ್ನಪ್ಪಿಲ್ಲ’ ಅಂತಾ ಹೇಳಿದ್ದಾರೆ. ರೈತರ ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಪರಿಹಾರ ನೀಡಲು ಸರ್ಕಾರ ಯೋಚಿಸುತ್ತಿದೆಯೇ ಅಥವಾ ಒದಗಿಸುತ್ತಿದೆಯೇ ಎಂದು ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರು ಜಂಟಿ ಪ್ರಶ್ನೆ ಕೇಳಿದ್ದರು.   

ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಸೇರಿದಂತೆ ಅವರ ಪ್ರಮುಖ ಬಾಕಿ ಇರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ ನಂತರ ದೆಹಲಿ ಗಡಿಯಲ್ಲಿ ವರ್ಷವಿಡೀ ನಡೆದ ಪ್ರತಿಭಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ಕೈಬಿಟ್ಟಿತ್ತು.

Exit mobile version