೧೨ನೇ ತರಗತಿ ಪರೀಕ್ಷೆ ರದ್ದತಿ ಕುರಿತು ಎರಡು ದಿನಗಳಲ್ಲಿ ಅಂತಿಮ ನಿರ್ಧಾರ

ನವದೆಹಲಿ, ಮೇ. 31: ಕೊರೊನಾ ಮಧ್ಯೆ 12ನೇ ತರಗತಿ ಪರೀಕ್ಷೆಗಳನ್ನು ನಡೆಸಬೇಕೇ ಎಂಬ ಕುರಿತಾಗಿ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರವು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಿಬಿಎಸ್ಇ ಮತ್ತು ಸಿಐಎಸ್ ಸಿಇ ಮಂಡಳಿಗಳು ನಡೆಸುವ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ಮತ್ತು ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರಿದ್ದ ಪೀಠಕ್ಕೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಈ ಮಾಹಿತಿ ನೀಡಿದರು. ‘ನೀವು ಈ ಸಂಬಂಧ ನಿರ್ಧಾರವನ್ನು ಕೈಗೊಳ್ಳಿ. ಅದಕ್ಕೆ ನೀವು ಅರ್ಹರು. ಒಂದು ವೇಳೆ ಹಿಂದಿನ ವರ್ಷದ ನೀತಿಯನ್ನು ರದ್ದುಗೊಳಿಸುವುದಿದ್ದರೆ, ಅದಕ್ಕೆ ಸರಿಯಾದ ಕಾರಣವನ್ನು ನೀಡಬೇಕು’ ಎಂದು ಪೀಠವು ತಿಳಿಸಿತು.

ಪರೀಕ್ಷೆ ರದ್ದುಪಡಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿರುವ ಮಮತಾ ಶರ್ಮಾ, ನಿರ್ದಿಷ್ಟ ಕಾಲಮಿತಿಯೊಳಗೆ 12ನೇ ತರಗತಿ ಫಲಿತಾಂಶ ಪ್ರಕಟಿಸಲು ‘ವಸ್ತುನಿಷ್ಠ ಸೂತ್ರವಿಧಾನ’ ಅನುಸರಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕು ಎಂದೂ ಮನವಿ ಮಾಡಿದ್ದಾರೆ.

Exit mobile version