ಕೋವಿಡ್‌ ಆಸ್ಪತ್ರೆಗೆ ಆಕಸ್ಮಿಕ ಬೆಂಕಿ: 13 ರೋಗಿಗಳು ಸಜೀವ ದಹನ

ಮುಂಬೈ, ಏ. 23: ಆಕ್ಸಿಜನ್‌ ಸೋರಿಕೆಯಾಗಿ 24 ಮಂದಿ ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ, ಕೋವಿಡ್-19 ಸೆಂಟರ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 13 ಕೊರೋನಾ ರೋಗಿಗಳು ಸಜೀವ ದಹನವಾಗಿರುವ ಮಹಾರಾಷ್ಟ್ರದಲ್ಲಿ ಸಂಭವಿಸಿದೆ.

ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ವಾಸೈನಲ್ಲಿನ ವಿಜಯ್ ವಲ್ಲಭ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಅನೇಕ ರೋಗಿಗಳಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಐಸಿಯುನಲ್ಲಿದ್ದ 13 ರೋಗಿಗಳು ಸಾವನ್ನಪ್ಪಿದ್ದರೆ. ಇನ್ನೂ 3-4 ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವರುಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ವಾಸೈನ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 3.15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಐಸಿಯುನಲ್ಲಿದ್ದ ಏರ್​ ಕಂಡೀಷನರ್​ (ಎಸಿ)ನಲ್ಲಿ ಶಾರ್ಟ್​ ಸರ್ಕ್ಯೂಟ್ ಉಂಟಾಗಿದ್ದರಿಂದ ಬೆಂಕಿ ಹೊತ್ತಿದೆ ಎನ್ನಲಾಗಿದೆ. ಐಸಿಯುನಲ್ಲಿ 17 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 13 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ಬಗ್ಗೆ ತುರ್ತಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶ ನೀಡಿದ್ದಾರೆ.

ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ. ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ಡಾ. ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ 24 ರೋಗಿಗಳು ಸಾವನ್ನಪ್ಪಿದ್ದರು.

Exit mobile version