ಮನೆ ಮುಂದೆ ನಿಲ್ಲಿಸಿದ್ದ ಕಾರ್‌ಗಳಿಗೆ ಹಾನಿ ಐವರ ಬಂಧನ

ಬೆಂಗಳೂರು ಸೆ 27 : ನಗರದಆರ್‌ಆರ್‌ ನಗರದಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ದುಷ್ಕೃತ್ಯ ಮೆರೆದಿದ್ದ ಐದು ಮಂದಿ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಷ್ಕರ್ಮಿಗಳ ದುಷ್ಕೃತ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಆರ್‌ಆರ್‌ ನಗರದಲ್ಲಿನ 6 ಕಡೆ ಹಾಗೂ ಕೆಂಗೇರಿಯಲ್ಲಿ 8 ಕಾರುಗಳನ್ನು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಒಟ್ಟು 14 ಕಾರುಗಳ ಗಾಜು ಒಡೆದು ದುಷ್ಕೃತ್ಯ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳೆಲ್ಲರೂ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದಾರೆ. ಎಲ್ಲರೂ ಕೂಡ 7 ನೇ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಕೆಂಗೇರಿ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸ್ನೇಹಿತನ ಬರ್ತಡೇ ಪಾರ್ಟಿ ಮಾಡಿದ್ದರು. ನಂತರದಲ್ಲಿ ಕೂಲ್‌ ಡ್ರಿಂಗ್ಸ್‌ ಖರೀದಿಸಲು ಹೊರಗೆ ಬಂದಿದ್ದ ತಂಡ ಪೆಟ್ರೋಲ್‌ ಬಂಕ್‌ಗೆ ತೆರಳುವ ಮೊದಲು ರಸ್ತೆಯ ಪಕ್ಕದಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಒಡೆದಿದ್ದಾರೆ. 

ಐವರು ಆರೋಪಿಗಳ ಪೈಕಿ ಮೂವರು ಕೆಂಗೇರಿ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದರು. ಉಳಿದ ಇಬ್ಬರು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ವಾಹನಗಳನ್ನು ಜಖಂ ಮಾಡಿ ಪುಂಡಾಟ ನಡೆಸಿದ್ದ ಇಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ತನಿಖೆಗೆ ನಡೆಸುತ್ತಿದ್ದಾರೆ.

Exit mobile version