ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ನಿರ್ದೋಷಿ: ಕೋರ್ಟ್ ತೀರ್ಪು

ಪಣಜಿ, ಮೇ. 21: ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್ಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥಗೊಂಡಿದೆ. 2013ರಲ್ಲಿ ಗೋವಾದ ಐಷಾರಾಮಿ ಹೊಟೇಲೊಂದರ ಲಿಫ್ಟ್ನಲ್ಲಿ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಗೋವಾ ಸೆಷನ್ಸ್ ಕೋರ್ಟ್ ತರುಣ್ ತೇಜ್ಪಾಲ್ ನಿರ್ದೋಷಿ ಎಂಬುದಾಗಿ ಇಂದು ತೀರ್ಪು ನೀಡಿದೆ.

ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಧೀಶೆ ಕ್ಷಮಾ ಜೋಶಿ, ತಾಂತ್ರಿಕ ಕಾರಣಗಳಿಂದಾಗಿ ತೀರ್ಪನ್ನು ಇವತ್ತಿಗೆ (ಮೇ 21) ಕಾಯ್ದಿರಿಸಿದ್ದರು. ಈ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ ಎಂದು ಗೋವಾದ ಸೆಷನ್ಸ್ ನ್ಯಾಯಾಲಯ ಮೇ 12ರಂದು ತಿಳಿಸಿತ್ತು. ಆ ಪ್ರಕಾರವಾಗಿ ಇಂದು ತೀರ್ಪು ಪ್ರಕಟವಾಗಿದ್ದು, ತರುಣ್ ತೇಜ್ಪಾಲ್ ನಿರ್ದೋಷಿ ಎಂದು ನ್ಯಾಯಾಲಯ ಘೋಷಿಸಿದೆ.

ಈ ಪ್ರಕರಣದ ಕುರಿತು ಏಪ್ರಿಲ್ 27ರಂದೇ ತೀರ್ಪು ಪ್ರಕಟವಾಗಬೇಕಿತ್ತು. ಆದರೆ ನ್ಯಾಯಾಧೀಶರು ತೀರ್ಪು ನೀಡುವ ದಿನಾಂಕವನ್ನು ಮೇ 12ಕ್ಕೆ ಮುಂದೂಡಿದ್ದರು. ನಂತರ ಮತ್ತೆ ಮೇ 19ಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಸತತ ಮೂರನೇ ಬಾರಿಗೂ ನ್ಯಾಯಾಲಯ ತೀರ್ಪನ್ನು ಮಂದೂಡಿತ್ತು. ಅಂತಿಮವಾಗಿ ಇಂದು ತೀರ್ಪು ಹೊರಬಿದ್ದಿದೆ.

ಈ ಪ್ರಕರಣದ ವಿರುದ್ಧ ತರುಣ್ ತೇಜ್ಪಾಲ್ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರಾದರೂ ಪ್ರಕರಣರಣದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿ, ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿತ್ತು. ಅಲ್ಲದೆ ಆರು ತಿಂಗಳೊಳಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಗೋವಾ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.

Exit mobile version