ಭ್ರಷ್ಟರ ಕುತಂತ್ರಕ್ಕೆ ಬಡ ರೈತರೇ ಬಲಿ!

scam

ರೈತರ ಬೆಳೆ ಸಾಲ ಸುಸ್ತಿಯಾಗಲು ಆಡಳಿತ ಮಂಡಳಿಯೇ ಕಾರಣ. ಆಡಳಿತ ಮಂಡಳಿಯ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಇದೇ ಮಾರ್ಚ್ 21 ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಕೈಗೊಳ್ಳಲಿದ್ದೇವೆ ಎಂದು ಹೇಳಿದರು. ಮಳವಳ್ಳಿ ತಾಲ್ಲೂಕು, ತಳಗವಾದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇಲ್ಲಿ ಅಲ್ಪಾವಧಿ ಕೃಷಿ ಸಾಲ ಪಡೆದಿರುವ 600 ಕ್ಕೂ ಹೆಚ್ಚಿನ ರೈತರು ಸುಸ್ತಿದಾರರಾಗಿದ್ದು , ಇದಕ್ಕೆ ಸಂಘದ ಆಡಳಿತ ಮಂಡಳಿಯೇ ಸಂಪೂರ್ಣ ಹೊಣೆಯಾಗಿದೆ. 600 ಕ್ಕೂ ಹೆಚ್ಚಿನ ರೈತರ ಸುಮಾರು 3 ಕೋಟಿ ರೂಪಾಯಿ ಸಾಲ ಸುಸ್ತಿಯಾಗಿದೆ.

ತಮ್ಮದಲ್ಲದ ತಪ್ಪಿಗೆ ರೈತರು 30 ಲಕ್ಷ ರೂಪಾಯಿ ಬಡ್ಡಿ ಕಟ್ಟಬೇಕು, ಈ ಎಲ್ಲಾ ಸಾಲಗಳು ಆಧಾರ್ ಲಿಂಕ್ ಆಗಿರುವುದರಿಂದ ರೈತರಿಗೆ ಸಿಬಿಲ್ ರೇಟಿಂಗ್ ಕಡಿತವಾಗಿ ಅವರಿಗೆ ವಾಣಿಜ್ಯ ಬ್ಯಾಂಕುಗಳೂ ಸಾಲ ಕೊಡಲು ನಿರಾಕರಿಸುತ್ತವೆ. ರೈತ ವಿರೋಧಿ ಆಡಳಿತ ಮಂಡಳಿಯ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಸಂಘಕ್ಕೆ 6 ಲಕ್ಷ ರೂಪಾಯಿ, DCC ಬ್ಯಾಂಕಿಗೆ 20 ಲಕ್ಷ ರೂಪಾಯಿ ನಷ್ಟವಾಗಿದೆ. ಆಡಳಿತ ಮಂಡಳಿಯ ಭ್ರಷ್ಟಾಚಾರ ಮತ್ತು ಹಣ ದುರುಪಯೋಗದಿಂದ ಈಗಾಗಲೇ ನಷ್ಟದಲ್ಲಿರುವ ಸೊಸೈಟಿ ಈಗ ಸುಸ್ತಿಯಾಗಿ ಇನ್ನೆಂದೂ ಚೇತರಿಸಿಕೊಳ್ಳಲು ಸಾಧ್ಯವಿಲ್ಲದಂತೆ ದಿವಾಳಿಯಾಗಲಿದ್ದು, ಇದಕ್ಕೆ ಕಾರಣವಾದ ಆಡಳಿತ ಮಂಡಳಿಯನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಇದೇ 21.03.2022ರ ಸೋಮವಾರದಿಂದ ಮಂಡ್ಯ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭವಾಗಲಿದೆ ಎಂದು ಹೇಳಿದ್ದರು.

ಇದರಂತೆ ಧರಣಿ ಕೂಡ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ತಳಗವಾದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈ ಹಿಂದಿನ ಮತ್ತು ಈಗಿನ ಆಡಳಿತ ಮಂಡಳಿ ಸೊಸೈಟಿಯ ಕೋಟ್ಯಾಂತರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿವೆ. ಹಿಂದಿನ ಅಧ್ಯಕ್ಷ ಹನುಮಂತು ಸುಮಾರು ಒಂದು ಕೋಟಿ ರೂಪಾಯಿ, ಹಾಲಿ ಅಧ್ಯಕ್ಷ ಡಿ.ಸಿ.ಚೌಡಯ್ಯ 25 ಲಕ್ಷ ರೂಪಾಯಿ ದುರುಪಯೋಗ ಮಾಡಿಕೊಂಡಿದ್ದಾರೆ. ಮೇಕೆ ಸಾಲದ ಮೇಕೆಗಳಿಗೆ ವಿಮೆ ಮಾಡಿಸಲು ರೈತರಿಂದ ತಲಾ 4 ಸಾವಿರದಂತೆ ಹಿಡಿದು 6 ಲಕ್ಷ ರೂಪಾಯಿಗಳನ್ನು ವಿಮೆ ಮಾಡಿಸದೆ ಲಪಟಾಯಿಸಲಾಗಿದೆ.

ಈಗಾಗಲೇ ನಡೆದಿರುವ 3 ತನಿಖೆಗಳಲ್ಲಿ ಈ ಎಲ್ಲಾ ಅಂಶಗಳನ್ನು ನಮೂದಿಸಲಾಗಿದೆ. ಆದರೂ ರಾಜಕೀಯ ಒತ್ತಡ ಮತ್ತು ಭ್ರಷ್ಟಾಚಾರಕ್ಕೆ ಒಳಗಾಗಿ ಸಹಕಾರ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅದರಲ್ಲೂ ಮಂಡ್ಯ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶಂಕರ್ ಅವರು ಆಡಳಿತ ಮಂಡಳಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಇವರ ಕಛೇರಿಯ ಎದುರೇ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ಅದರೂ ಏನೂ ಪ್ರಯೋಜನವಾಗಿಲ್ಲ.

ವಿಧವೆಯರು, ವೃದ್ಧರು ಸೇರಿದಂತೆ ಬಡವರ ಸಂಘದಲ್ಲಿ 3 ಕೋಟಿ ರೂಪಾಯಿ ಠೇವಣಿ ಇರಿಸಿದ್ದಾರೆ. ಪಕ್ವಗೊಂಡ ಠೇವಣಿ ಹಣ ನೀಡಲು ಕೂಡ ಸಂಘದಲ್ಲಿ ಒಂದು ರೂಪಾಯಿಯೂ ಇಲ್ಲವಾಗಿದೆ. ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ನೀಡುತ್ತಿಲ್ಲ. ಕಳೆದ ಒಂದು ವರ್ಷದಿಂದ ರಸಗೊಬ್ಬರ, ಪಶು ಆಹಾರ, ಸಿಮೆಂಟ್ ಸೇರಿದಂತೆ ರೈತರಿಗೆ ಯಾವುದೇ ಸವಲತ್ತು ನೀಡುತ್ತಿಲ್ಲ. ರೈತರ ಸೂಪರ್ ಮಾರುಕಟ್ಟೆಗೆ ಹಾಕಿದ್ದ ಬಂಡವಾಳವೆಲ್ಲ ಖಾಲಿಯಾಗಿ ಈಗ ಪಾಳು ಕೊಂಪೆಯಾಗಿದೆ ಅದಕ್ಕೂ ಬೀಗ ಜಡಿಯಲಾಗಿದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಈ ಹೋರಾಟ ರೈತರ, ಸಂಘದ ಷೇರುದಾರರ ಹೋರಾಟ.

ಯಾರದೋ ಪ್ರಲೋಭನೆಗೆ ಸಿಲುಕಿ ನಡೆಯುತ್ತಿರುವ ಪಾವತಿ ಹೋರಾಟವಲ್ಲ. ಜನತೆ ತಮ್ಮ ಸಂಕಟದ ಪರಿಹಾರಕ್ಕೆ ನಡೆಸುತ್ತಿರುವ ಸ್ವಾಭಿಮಾನದ ಹೋರಾಟ, ಈ ಹೋರಾಟದಲ್ಲಿರುವ ಎಲ್ಲರೂ ನಾಯಕರು. ಪಕ್ಷ, ಪಂಗಡದ ಗೋಜಿಲ್ಲದ ಭ್ರಷ್ಟಾಚಾರ ವಿರೋಧಿ ಹೋರಾಟ. ಆಡಳಿತ ಮಂಡಳಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದರೆ, ಠೇವಣಿದಾರರಿಗೆ ಹಣ ಪಾವತಿಸಿದರೆ, ರಸಗೊಬ್ಬರ ಸೇರಿದಂತೆ ರೈತರಿಗೆ ಸವಲತ್ತು ನೀಡಿದರೆ ಹೋರಾಟ ತಾನಾಗಿಯೇ ನಿಲ್ಲುತ್ತದೆ. ಸಂಘದ CEO ಅಮಾನತಿಗೂ ರೈತರ ಹೋರಾಟಕ್ಕೂ ಯಾವ ಸಂಬಂಧವೂ ಇಲ್ಲ. ರೈತರ ಹೋರಾಟ ಎರಡು ವರ್ಷಗಳಿಂದ ನಡೆಯುತ್ತಿದ್ದು, CEO ಅಮಾನತಾಗಿರುವುದು ಒಂದು ತಿಂಗಳ ಹಿಂದೆ.

ಮೇಲಾಗಿ CEO ಅವರನ್ನು ಅಮಾನತು ಮಾಡಿರುವ ಆದೇಶದಲ್ಲಿ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಹೊರಿಸಿಲ್ಲ. ಆದರೆ ಅವರಿಂದ ಅಕ್ರಮವಾಗಿ ದಾಖಲೆಗಳನ್ನು ಪಡೆಯುವ, ಬಲಿಪಶು ಮಾಡುವ ಆಡಳಿತ ಮಂಡಳಿಯ ಪ್ರಯತ್ನಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಒಂದು ವೇಳೆ ನಮ್ಮ ಸಮಸ್ಯೆಗೆ ಇಲ್ಲಿ ಪರಿಹಾರ ಸಿಗದಿದ್ದರೆ, ಖಡಾಖಂಡಿತವಾಗಿ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಛೇರಿ ಎದುರು ನಿಂತು ನಮ್ಮ ಹೋರಾಟವನ್ನು ಆರಂಭಿಸುತ್ತೇವೆ ಎಂಬ ಎಚ್ಚರಿಕೆ ನೀಡುತ್ತಿದ್ದೇವೆ.

Exit mobile version