60 ಲಕ್ಷ ಹಣದೊಂದಿಗೆ ಪರಾರಿಯಾದ ಎಟಿಎಂ ಚಾಲಕ

ಬೆಂಗಳೂರು, ಫೆ. 03:  ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಹೋದಾಗ ಚಾಲಕ 60 ಲಕ್ಷ ಹಣದೊಂದಿಗೆ ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ನಿನ್ನೆ ಸಂಜೆ 6.30ರಲ್ಲಿ ವ್ಯಾನ್ ಬಂದಿದೆ.

ಹಣವನ್ನು ಎಟಿಎಂಗೆ ತುಂಬಲು ಸಿಬ್ಬಂದಿಗಳು ಕೇಂದ್ರದೊಳಗೆ ಹೋಗುತ್ತಿದ್ದಂತೆ ಇತ್ತ ಚಾಲಕ 60 ಲಕ್ಷ ಹಣದೊಂದಿಗೆ ವ್ಯಾನ್‍ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಎಟಿಎಂಗೆ ಹಣ ತುಂಬಿ ವಾಪಸ್ಸಾದ ಸಿಬ್ಬಂದಿಗಳು ವಾಹನದಲ್ಲಿ ಚಾಲಕ ಇಲ್ಲದಿರುವುದನ್ನು ಕಂಡು ಸುತ್ತಮುತ್ತ ಪರಿಶೀಲಿಸಿದಾಗ ಆತ ಪತ್ತೆಯಾಗಲಿಲ್ಲ.

ಹೀಗಾಗಿ ವಾಹನದಲ್ಲಿ ಹಣ ಪರಿಶೀಲಿಸಿದಾಗ 60 ಲಕ್ಷ ರೂ.  ಮಾಯವಾಗಿರುವುದನ್ನು ಕಂಡು ಸಿಬ್ಬಂದಿಗಳು ಗಾಬರಿಯಾದರು. ಕೂಡಲೇ ತಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿ ನಂತರ ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಪರಾರಿಯಾಗಿರುವ ಚಾಲಕನ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

Exit mobile version