ತೈಲ‌ಬೆಲೆ‌ ಏರಿಕೆಗೆ ಹಿಂದಿನ ಸರ್ಕಾರದ ನೀತಿಯೇ ಕಾರಣ: ಪ್ರಧಾನಿ ಮೋದಿ

ಚೆನ್ನೈ, ಫೆ 18: ದೇಶದೆಲ್ಲೆಡೆ ‌ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆ ಕುರಿತು ಸಾರ್ವಜನಿಕರು ಮಾತ್ರವಲ್ಲದೇ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಬೆಲೆ‌ ಏರಿಕೆಗೆ ಕಾರಣ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಪೆಟ್ರೋಲ್, ಡೀಸೆಲ್‍ ಬೆಲೆ ಏರಿಕೆಗೆ ಹಿಂದಿನ ಸರ್ಕಾರದ ನೀತಿಗಳು ಕಾರಣ ಎಂದು ಆರೋಪಿಸಿದ್ದಾರೆ.

ಚೆನ್ನೈನಲ್ಲಿ ತೈಲ ಮತ್ತು ಅನಿಲ ಯೋಜನೆಗಳ ಉದ್ಘಾಟನಾ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ದೇಶದಲ್ಲಿ ಆಡಳಿತ ನಡೆಸಿದ ಸರ್ಕಾರಗಳು, ಇಂಧನ ಅವಲಂಬನೆಯನ್ನು ಕಡಿಮೆ ಮಾಡುವ ಕಡೆಗೆ ಹಿಂದಿನ ಗಮನ ಹರಿಸಿದ್ದರೆ ಮಧ್ಯಮ ವರ್ಗಕ್ಕೆ ಈ ಹೊರೆ ಹೊರುವ ಅವಶ್ಯಕತೆ ನಿರ್ಮಾಣ ಆಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ, 2019-20ರಲ್ಲಿ ದೇಶದ ಬೇಡಿಕೆಯ ಶೇ.85 ತೈಲವನ್ನು ದೇಶ ಆಮದು ಮಾಡಿದೆ. ಅದೇ ರೀತಿ ಶೇ.53 ಅನಿಲವನ್ನು ಆಮದು ಮಾಡಿಕೊಂಡಿದೆ. ಈ ಆಮದು ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ಆಗಬೇಕಾಗಿದೆ. ಹೀಗಾಗಿ ಇಂಧನದ ಮೇಲಿನ ಅವಲಂಬನೆ ಕಡಿಮೆ ಮಾಡುವ ಅವಶ್ಯಕತೆ ಇದೆ ಎಂದರು.

ಇನ್ನೂ, ಮಧ್ಯಮವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುತ್ತಿದೆ. ಪೆಟ್ರೋಲ್ ದರ ಕಡಿಮೆ ಮಾಡಲು ಪೆಟ್ರೋಲ್ ನಲ್ಲಿ ಎಥೆನಾಲ್ ಬೆರೆಸುವ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದೇವೆ.‌ ಈ ನಿಟ್ಟಿನಲ್ಲಿ ದೇಶ ನವೀಕರಿಸಬಹುದಾದ ಇಂಧನಗಳ ಬಳಕೆ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. 2030ರ ವೇಳೆಗೆ ದೇಶದಲ್ಲಿ ಉತ್ಪಾದನೆಯಾಗುವ ಇಂಧನದಲ್ಲಿ ಶೇ 40ರಷ್ಟು ಇಂಧನಗಳು ಮರು ಬಳಕೆಗೆ ಯೋಗ್ಯವಾದ ಮಾದರಿಯಲ್ಲಿ ಇರಲಿವೆ. ಈ ರೀತಿಯ ಕ್ರಮಗಳಿಂದ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಲು ಸಾಧ್ಯ. ಆದರೆ, ಈ ಹಿಂದಿನ ಸರ್ಕಾರಗಳು ಈ ನಿಟ್ಟಿನಲ್ಲಿ ಕೊಂಚವೂ ಶ‍್ರಮಿಸಲಿಲ್ಲ ಎಂದು ವಿಷಾದಿಸಿದರು.

Exit mobile version