ಕೊರೊನಾ ನಿಯಂತ್ರಣ ಚರ್ಚೆಗೆ ರಾಜ್ಯಪಾಲರ ಸಭೆ: ಸಚಿವ ಈಶ್ವರಪ್ಪ ಅಚ್ಚರಿ

ಶಿವಮೊಗ್ಗ, ಏ. 20: ಕೋವಿಡ್ ನಿಯಂತ್ರಣಕ್ಕೆ ರಾಜ್ಯಪಾಲ ವಿ.ಆರ್. ವಾಲಾ ಕರೆದಿರುವ ಸಭೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ‍್ವರಪ್ಪ ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳ ಸರ್ಕಾರ ಇರುವ ಸಂದರ್ಭದಲ್ಲಿ ರಾಜ್ಯಪಾಲರು ಸಭೆ ಕರೆದಿರುವುದು ಅರ್ಥವಾಗುತ್ತಿಲ್ಲ ಎಂದರು.

ಕೋವಿಡ್ ನಿಯಂತ್ರಣಕ್ಕೆ ಸಬಂಧಿಸಿದಂತೆ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು ಹಾಗೂ ಸರ್ವಪಕ್ಷ ಸಭೆಯನ್ನು ರಾಜ್ಯಪಾಲರು ಕರೆದಿದ್ದಾರೆ. ನಾನು ಸಭೆ ಕರೆಯಬಾರದಿತ್ತು ಎಂದು ಹೇಳಲು ಬಯಸುವುದಿಲ್ಲ. ಕೋವಿಡ್ ನಿಯಂತ್ರಿಸಲು ರಾಜ್ಯಪಾಲರು ಆಸಕ್ತಿ ತೋರುತ್ತಿರುವುದು ಒಳ್ಳೆಯದೆ. ಆದರೆ, ರಾಜ್ಯದಲ್ಲಿ ಇದು ಒಂದು ಹೊಸ ವ್ಯವಸ್ಥೆ ಹುಟ್ಟುಹಾಕಿದಂತೆ ಆಗುತ್ತದೆ ಎಂದು ಹೇಳಿದರು.

ಕೋವಿಡ್ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್’ಡೌನ್ ಜಾರಿಗೊಳಿಸುವ ಅವಶ್ಯಕತೆ ಇಲ್ಲ. ಕೋವಿಡ್ ನಿಯಂತ್ರಣಕ್ಕೆ ಜನಜಾಗೃತಿಯೇ ಪರಿಹಾರವಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಮನವಿ ಮಾಡಿದರು.

Exit mobile version