ರಾಜ್ಯ ಸರ್ಕಾರಿ ನೌಕರರಿಂದ ವೇತನ ಹೆಚ್ಚಳಕ್ಕೆ ಒತ್ತಡ ; ಬೊಕ್ಕಸಕ್ಕೆ 12 ಸಾವಿರ ಕೋಟಿ ಹೊರೆ!

ಬೆಂಗಳೂರು : 2023ರ ವಿಧಾನಸಭಾ ಚುನಾವಣೆಗೆ(Vidhansabha Elections) ಮುನ್ನ ರಾಜ್ಯ ಬಿಜೆಪಿ(State BJP) ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಹೌದು, ರಾಜ್ಯ ಸರ್ಕಾರಿ ನೌಕರರು ಏಳನೇಯ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆರನೇ ವೇತನ ಆಯೋಗದ ಅವಧಿ ಜುಲೈ 31ಕ್ಕೆ ಕೊನೆಗೊಂಡಿದ್ದು, ಹೀಗಾಗಿ ಸರ್ಕಾರಿ ನೌಕರರ ಈ ಹೊಸ ಬೇಡಿಕೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.


ಸದ್ಯ 6ನೇ ವೇತನ ಆಯೋಗದ ಅವಧಿ ಮುಕ್ತಾಯಗೊಂಡಿದ್ದು , ಸರ್ಕಾರಿ ನೌಕರರು ವೇತನ ಹೆಚ್ಚಳಕ್ಕೆ ಒತ್ತಡ ಹೇರುತ್ತಿದ್ದಾರೆ. ರಾಜ್ಯ ಸರ್ಕಾರ, ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದರೆ, ರಾಜ್ಯ ಬೊಕ್ಕಸಕ್ಕೆ 12 ಸಾವಿರ ಕೋಟಿ ರೂಪಾಯಿ ಹೊರೆಯಾಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ಶೇಕಡಾ 20 ರಿಂದ 30 ರಷ್ಟು ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.

ಇದರಿಂದ ಗುಂಪು ಡಿ : ರೂ 8,000-ರೂ 10,000, ಗುಂಪು ಸಿ : ರೂ 15,000-ರೂ 22,000, ಗುಂಪು ಬಿ : ರೂ 25,000-ರೂ 35,000, ಗುಂಪು ಎ : ರೂ 35,000-ರೂ 50,000 ರಷ್ಟು ವೇತನ ಹೆಚ್ಚಾಗಲಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ೧೨ ಸಾವಿರ ಕೋಟಿ ರೂ. ಹೊರೆಯಾಗಲಿದೆ ಎನ್ನಲಾಗುತ್ತಿದೆ. ಹೀಗಾಗಿ ವೇತನ ಹೆಚ್ಚಳಕ್ಕೆ ಸರ್ಕಾರ ಸಾಕಷ್ಟು ಮೀನಾಮೇಷ ಏಣಿಸುತ್ತಿದೆ.

ಇನ್ನೊಂದೆಡೆ ಚುನಾವಣಾ ವರ್ಷದಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನು ನಿರ್ಲಕ್ಷಿಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದೊಡ್ಡ ಸವಾಲು ಎದುರಾಗಿದೆ. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು, ಆರನೇ ವೇತನ ಆಯೋಗವು ಶೇಕಡಾ 29 ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು.

ಇತರ ರಾಜ್ಯ ಸರ್ಕಾರಿ ನೌಕರರಿಗೆ ಹೋಲಿಸಿದರೆ ನಮ್ಮ ರಾಜ್ಯದ ಸರ್ಕಾರಿ ನೌಕರರ ವೇತನ ತುಂಬಾ ಕಡಿಮೆ ಇದೆ. ಹೀಗಾಗಿ ಈ ಬಾರಿ ರಾಜ್ಯ ಸರ್ಕಾರ ಮೂಲ ವೇತನದ ಶೇ.೫೦ ರಷ್ಟು ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Exit mobile version