ಕರ್ನಾಟಕದಲ್ಲಿ ಗ್ರಾಮ ಒನ್‌ ಸೇವೆಗೆ ಬೊಮ್ಮಾಯಿ ಚಾಲನೆ

gram one bommai

ಬೆಂಗಳೂರು, ಜ.2 :- ಸರ್ಕಾರದ ಹಲವು ಯೋಜನೆಗಳಿಗೆ ತಾಲ್ಲೂಕು ಕೇಂದ್ರಗಳಿಗೆ ಅಲೆದಾಡುವ ಬದಲು ಸರ್ಕಾರದ ವಿವಿಧ ಇಲಾಖೆಗಳ ಪ್ರಮುಖ ಸೇವೆಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಮೀಣ ಭಾಗಗಳಲ್ಲಿ ಜನರಿಗೆ ತಲುಪಿಸುವ ಗ್ರಾಮ ಒನ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿಂದು ವರ್ಚುವಲ್ ಮೂಲಕ ರಾಜ್ಯದ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಹಲವು ಸೇವೆಗಳನ್ನು ಒಂದೇ ಸೂರಿನಡಿ ನಗರ ಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ. ಅದೇ ರೀತಿ ಗ್ರಾಮೀಣ ಭಾಗದಲ್ಲೂ ಒದಗಿಸುವ ಉದ್ದೇಶದಿಂದ ಗ್ರಾಮ ಒನ್ ಜಾರಿಗೆ ತರಲಾಗಿದೆ. ಇದರಿಂದ ತಾಲ್ಲೂಕು ಕಚೇರಿಗಳಿಗೆ ಜನರು ಅಲೆದಾಡುವುದು ತಪ್ಪಲಿದೆ.

ಕಂದಾಯ ಇಲಾಖೆಯ ವಿವಿಧ ದಾಖಲೆಗಳು, ಜಾತಿ ಆದಾಯ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ ಮೊದಲಾದ ಯೋಜನೆಗಳು ಗ್ರಾಮ ಮಟ್ಟದಲ್ಲೇ ಜನರಿಗೆ ತಲುಪಬೇಕು. ಈ ಯೋಜನೆ ಯಶಸ್ವಿಯಾದಾಗ ಸಮಾಧಾನ ತರಲಿದೆ. ಈಗಾಗಲೇ 6 ಲಕ್ಷ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಸಮಸ್ಯೆಗಳಿಗೆ ಆನ್‍ಲೈನ್‍ನಲ್ಲೇ ಪರಿಹಾರ ದೊರೆಯುವಂತಾಗಬೇಕು ಎಂದರು.

ಗ್ರಾಮ ಒನ್ ಯೋಜನೆಯಿಂದ ಸಮಯ ಉಳಿತಾಯವಾಗಲಿದೆ. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ರಾಜ್ಯದ 326 ಗ್ರಾ.ಪಂ.ಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಇದಕ್ಕೂ ಮುನ್ನ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ಲೋಪದೋಷಗಳನ್ನು ಸರಿಪಡಿಸಲಾಗಿದೆ ಎಂದರು. ಸರ್ಕಾರದ ಸೇವೆಗಳನ್ನು ಸಮರ್ಪಕವಾಗಿ, ಸುಲಭವಾಗಿ ಜನರಿಗೆ ತಲುಪಿಸಿ ವಿಶ್ವಾಸ ಮೂಡಿಸಬೇಕು. ಮಹಾತ್ಮ ಗಾಂೀಜಿಯವರು ಹೇಳಿದಂತೆ ಗ್ರಾಮ ಸ್ವರಾಜ್ಯದಿಂದ, ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ ಗ್ರಾಮ ಸ್ವರಾಜ್ಯದೆಡೆಗೆ ಇದು ಕೊಂಡೊಯ್ಯಲಿದೆ.

Exit mobile version