ಭಾರತೀಯ ಐಟಿ ಉದ್ಯೋಗಿಗಳಿಗೆ ಸುವರ್ಣಾವಕಾಶ: ದುಡ್ಡಿದ್ದವರಿಗೆ ಅಮೆರಿಕ ಗ್ರೀನ್‌ ಕಾರ್ಡ್‌

ಭಾರತದ ಲಕ್ಷಾಂತರ ಐಟಿ ಉದ್ಯೋಗಿಗಳಿಗೊಂದು ಸುವರ್ಣಾವಕಾಶ ಸಿಕ್ಕಿದೆ. 3.70 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಪಾವತಿಸಿದ್ರೆ ಅಮೇರಿಕದ ಗ್ರೀನ್‌ ಕಾರ್ಡ್‌ಗೆ ಅರ್ಹತೆ ಸಿಗುತ್ತೆ. ದುಡ್ಡಿದ್ದವರಿಗೆ ಶಾಶ್ವತ ನಾಗರೀಕತ್ವ ನೀಡಲು ಅಮೆರಿಕ ಚಿಂತನೆ.

ವಾಷಿಂಗ್ಟನ್‌(ಸೆ.14): ಭಾರತದ ಲಕ್ಷಾಂತರ ಐಟಿ ಉದ್ಯೋಗಿಗಳಿಗೊಂದು ಸಿಹಿ ಸುದ್ದಿ. ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಿ ಉದ್ಯೋಗ ಕೈಗೊಳ್ಳಬೇಕು ಎಂದು ಅನೇಕ ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಭಾರತೀಯರಿಗೆ ಸುವರ್ಣ ಅವಕಾಶ ಲಭಿಸಿದೆ. ಹೆಚ್ಚುವರಿ ಶುಲ್ಕವನ್ನು ಪಾವತಿಸಿದರೆ ಆದ್ಯತೆಯ ಮೇರೆಗೆ ಗ್ರೀನ್‌ ಕಾರ್ಡ್‌ ನೀಡುವ ಹೊಸ ಮಸೂದೆಯೊಂದನ್ನು ರೂಪಿಸಲಾಗಿದೆ. ಒಂದು ವೇಳೆ ಈ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡರೆ ಭಾರತೀಯ ಐಟಿ ಉದ್ಯೋಗಿಗಳು ಕಾನೂನು ಸಮ್ಮತವಾಗಿ ಅಮೆರಿಕದಲ್ಲಿ ನೆಲೆಸಲು ದಾರಿ ಸುಗಮವಾದಂತಾಗಲಿದೆ.

ನೂತನ ಮಸೂದೆಯ ಪ್ರಕಾರ, ಒಂದು ವೇಳೆ ಗ್ರೀನ್‌ ಕಾರ್ಡ್‌ ಪಡೆಯಲು ಆದ್ಯತಾ ದಿನಾಂಕಕ್ಕಿಂತ 2 ವರ್ಷ ಕಾದವರು, 3.70 ಲಕ್ಷ ರು. (5 ಸಾವಿರ ಡಾಲರ್‌ ) ಹೆಚ್ಚುವರಿ ಶುಲ್ಕವನ್ನು ಪಾವತಿಸಿದರೆ, ಸಂಖ್ಯೆಗಳ ಮಿತಿಯನ್ನು ಪರಿಗಣಿಸದೇ ಗ್ರೀನ್‌ ಕಾರ್ಡ್‌ಗೆ ಅರ್ಹತೆಗಿಟ್ಟಿಸಲಿದ್ದಾರೆ. ಅಂದರೆ ಹೆಚ್ಚುವರಿ ಶುಲ್ಕ ಪಾವತಿಸಲು ಸಿದ್ಧವಿದ್ದವರಿಗೆ ಗ್ರೀನ್‌ ಕಾರ್ಡ್‌ ಪಡೆಯಲು ಇರುವ ಮಿತಿ ರದ್ದಾಗಲಿದೆ.

ಅಮೆರಿಕ ನಾಗರಿಕ ಪ್ರಾಯೋಜಕತ್ವದಲ್ಲಿ ಕುಟುಂಬ ಆಧಾರಿತ ವಲಸೆ ಕೈಗೊಳ್ಳಲು ಬಯಸುವವರು 1.77 ಲಕ್ಷ ರು. ಹೆಚ್ಚುವರಿ ಶುಲ್ಕ ಪಾವತಿಸಿದರೆ, ಅವರನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುತ್ತದೆ. ಪ್ರಸ್ತುತ ಒಂದು ದೇಶಕ್ಕೆ 1.40 ಲಕ್ಷ ಗ್ರೀನ್‌ ಕಾರ್ಡ್‌ ಅಥವಾ ಶೇ.7ರಷ್ಟುಮಿತಿ ಮಿತಿಯನ್ನು ವಿಧಿಸಲಾಗಿದೆ. ಇದರಿಂದಾಗಿ ಪ್ರತಿಭಾವಂತರು ಗ್ರೀನ್‌ ಕಾರ್ಡ್‌ ಪಡೆಯುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

Exit mobile version