Jerusalem: ಆಸ್ಪತ್ರೆಗಳು ಮತ್ತು ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲಿ (Israel) ಸೇನಾ ಪಡೆಗಳು ದಾಳಿ ಮಾಡುತ್ತಿವೆ ಎಂದು ಆರೋಪಿಸುತ್ತಾ, ಇಸ್ರೇಲ್ ಸೇನೆ ಗಾಜಾಪಟ್ಟಿಯಲ್ಲಿ ಅಮಾಯಕರ ಹತ್ಯೆ ಮಾಡುತ್ತಿದೆ ಎಂದು ಅಂತರಾಷ್ಟ್ರೀಯ ಸಮುದಾಯದ ಮುಂದೆ ಬಿಂಬಿಸುತ್ತಿದ್ದ ಹಮಾಸ್ (Hamas) ಉಗ್ರರ ಕರಾಳ ಸತ್ಯವನ್ನು ಇಸ್ರೇಲ್ ಸೇನೆ ವಿಡಿಯೋ ಮೂಲಕ ಇಡೀ ಜಗತ್ತಿಗೆ ತಿಳಿಸಿದೆ.
ಗಾಜಾಪಟ್ಟಿಯ ಮೇಲೆ ವೈಮಾನಿಕ ದಾಳಿಯ ನಂತರ ಇದೀಗ ಉತ್ತರ ಗಾಜಾಪಟ್ಟಿಯ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸುತ್ತಿದೆ. ಈ ವೇಳೆ ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಸುರಂಗವೊಂದು ಇರುವುದು ಕಂಡು ಬಂದಿದೆ. ಖಚಿತ ಮಾಹಿತಿ ಮೇರೆಗೆ ಇಸ್ರೇಲ್ ಸೇನೆ ಮಕ್ಕಳ ಆಸ್ಪತ್ರೆಯನ್ನು ಸುತ್ತುವರೆದಿದೆ. ಇಲ್ಲಿಯೇ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಇಲ್ಲಿಂದರೆ ಅನೇಕ ದಾಳಿಗಳಿಗೆ ರೂಪರೇಷ ಸಿದ್ದಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಈ ಸುರಂಗದ ವಿಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡುವ ಮೂಲಕ ಮೂಲಕ ಹಮಾಸ್ ಉಗ್ರರ ಕೃತ್ಯವನ್ನು ಬಹಿರಂಗ ಮಾಡಿದೆ. ಗಾಜಾಪಟ್ಟಿಯಲ್ಲಿರುವ ರಾಂಟಿಸ್ಸಿ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಪೋಟಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿದೆ. ರಾಂಟಿಸ್ಸಿ ಮಕ್ಕಳ ಆಸ್ಪತ್ರೆ ಮತ್ತು ಹಮಾಸ್ನ ಪ್ರಮುಖ ಉಗ್ರ ನಾಯಕನ ಮನೆಗೆ ಸಂಪರ್ಕ ಕಲ್ಪಿಸುವ ಸುರಂಗ ಇದಾಗಿದ್ದು, 183 ಮೀಟರ್ (Meter) ಉದ್ದವಿದೆ. ಅಚ್ಚರಿ ಎಂದರೆ ಸುರಂಗವು ಬುಲೆಟ್ ಫ್ರೂಫ್ ಬಾಗಿಲುಗಳಿಂದ ಮುಚ್ಚಲ್ಪಟ್ಟಿದ್ದು, ಶಾಲೆ ಮತ್ತು ಯುಎನ್ ಕಟ್ಟಡದ ಪಕ್ಕದಲ್ಲಿದೆ. ಹೀಗಾಗಿಯೇ ಇದರ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಈ ಸುರಂಗದಲ್ಲಿ ಗ್ರೆನೇಡ್, ಬಾಂಬ್ಗಳು, ಬುಲೆಟ್ ಪ್ರೂಫ್ ಜಾಕೆಟ್ (Bullet Proof Jacket) , ರಾಕೆಟ್ ಲಾಂಚರ್ಗಳು ಸಿಕ್ಕಿವೆ. ಇಸ್ರೇಲ್ ಸೇನೆ ಮಕ್ಕಳ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ಮಾಡುವ ಮೂಲಕ ಮಗ್ದ ಮಕ್ಕಳನ್ನು ಹತ್ಯೆ ಮಾಡುತ್ತಿದೆ ಎಂದು ಹಮಾಸ್ ಆರೋಪಿಸಿತ್ತು. ಆದರೆ, ಇಸ್ರೇಲ್ ಈ ಆರೋಪವನ್ನು ತಳ್ಳಿ ಹಾಕಿ, ಹಮಾಸ್ ಉಗ್ರರ ನಿಜ ಬಣ್ಣವನ್ನು ಬಯಲು ಮಾಡಿದೆ. ಹಮಾಸ್ ಉಗ್ರರು ಮಕ್ಕಳು ಮತ್ತು ಮುಗ್ದ ಜನರನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದೆ.