ಹಠ ಮಾಡ್ಬೇಡಿ, ಕೆಲಸಕ್ಕೆ ಬನ್ನಿ: ಸಾರಿಗೆ ನೌಕರರಿಗೆ ಸಿಎಂ ಬಿಎಸ್‌ವೈ ಮನವಿ

ಬೆಂಗಳೂರು, ಏ. 09: ಸಾರಿಗೆ ನೌಕರರು ಹಠ ಮಾಡದೇ ಕೆಲಸಕ್ಕೆ ಹಾಜರಾಗಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಾರಿಗೆ ನೌಕರರ ಮುಷ್ಕರ ಕುರಿತು ಶುಕ್ರವಾರ ಮಾತನಾಡಿದ ಅವರು, ಆದಾಯದಲ್ಲಿ ಶೇ. 86 ರಷ್ಟು ಭಾಗ ಸರ್ಕಾರಿ ನೌಕರಿಗೆ ವೇತನ, ಪಿಂಚಣಿ ಇತರೆಗೆ ಖರ್ಚಾಗುತ್ತಿದೆ. ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಹಠಕ್ಕೆ ಬೀಳಬಾರದು. ಈಗಾಗಲೇ 9 ಬೇಡಿಕೆಗಳಲ್ಲಿ‌ 8 ಬೇಡಿಕೆ ಈಡೇರಿಸಿದ್ದೇವೆ. ಅದರಲ್ಲಿ ಲೋಪ ಏನಾದರು ಇದ್ದರೆ ಸರಿಪಡಿಸೋಣ. ಅದನ್ನು ಬಿಟ್ಟು ಹೀಗೆ ಹಠ ಮಾಡುವುದು ಸರಿಯಲ್ಲ ಎಂದು ಸಾರಿಗೆ ನೌಕರರಿಗೆ ಮನವಿ ಮಾಡಿದರು.

ಇವತ್ತಿನ ಪರಿಸ್ಥಿತಿಯಲ್ಲಿ 6ನೇ ವೇತನ‌ ಆಯೋಗ ಶಿಫಾರಸು ಸಾಧ್ಯವೇ ಇಲ್ಲ. ಹಾಗಿದ್ದರೂ ಹಠಕ್ಕೆ ಬೀಳುವುದು ಸರಿಯಲ್ಲ. ಇದನ್ನು ಅರ್ಥ ಮಾಡಿಕೊಂಡು ಕೆಲಸಕ್ಕೆ ಬನ್ನಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ನಡೆದುಕೊಳ್ಳಿ ಎಂದು ತಿಳಿ ಹೇಳಿದರು.

ಇನ್ನೂ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ’ರಾಜ್ಯದ ಒಟ್ಟು ಆದಾಯದ ಶೇ. 85 ರಷ್ಟು, ವೇತನ, ಭತ್ಯೆ, ಪಿಂಚಣಿ ಮತ್ತಿತರ ಯೋಜನೇತರ ವೆಚ್ಚಗಳಿಗೆ ವ್ಯಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಲ್ಪ ಆದಾಯ ಲಭ್ಯವಿರುತ್ತದೆ. ಬಜೆಟ್ ಅಧಿವೇಶನದಲ್ಲಿ ವಿಪಕ್ಷ ನಾಯಕರು ಪ್ರಸ್ತಾಪಿಸಿದ್ದಂತೆ, ಯೋಜನೇತರ ವೆಚ್ಚ ಈಗಾಗಲೇ ಅಧಿಕವಾಗಿದೆ.

‘ಪ್ರಸಕ್ತ ಸಂದರ್ಭಗಳಲ್ಲಿ ಮತ್ತಷ್ಟು ಹೆಚ್ಚು ಅನುದಾನವನ್ನು ಯೋಜನೇತರ ವೆಚ್ಚಗಳಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಲಾಕ್ ಡೌನ್ ಸಂದರ್ಭದಲ್ಲಿ ಸಹ ಸಾರಿಗೆ ನೌಕರರ ಹಿತರಕ್ಷಣೆ ದೃಷ್ಟಿಯಿಂದ ಅವರಿಗೆ ವೇತನ ನೀಡಲು, ಸರ್ಕಾರ 2,300 ಕೋಟಿ ರೂ. ಗಳ ಅನುದಾನ ನೀಡಿದೆ.

ಅಲ್ಲದೇ ಸವಾಲಿನ ಸಂದರ್ಭಗಳಲ್ಲಿಯೂ ಸಹ ಸಾರಿಗೆ ಸಂಸ್ಥೆಗಳ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದ್ದು, 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯೆ ನೀಡಲು ಸಾಧ್ಯವಿರುವುದಿಲ್ಲ. ಆದ್ದರಿಂದ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ವಿನಂತಿಸಿದ್ದಾರೆ.

Exit mobile version