Dharwad: ಮಹತ್ವದ ಬೆಳವಣಿಗೆಯಲ್ಲಿ ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವುದಕ್ಕೆ ಹೈಕೋರ್ಟ್ ಧಾರವಾಡ ಪೀಠ ಅನುಮತಿ ನೀಡಿದೆ. ಈದ್ಗಾ ಮೈದಾನದ ಒಡೆತನ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸೇರಿದ್ದು, ಹೀಗಾಗಿ ಅವರು ಅನುಮತಿ ನೀಡದರೆ ಅಲ್ಲಿ ಗಣೇಶೋತ್ಸವ ಆಚರಣೆ ಮಾಡಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಇನ್ನು ಹುಬ್ಬಳ್ಳಿ- ಧಾರವಾಡ (Dharwad) ಮಹಾನಗರ ಪಾಲಿಕೆಯು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಅಂಜುಮನ್ ದರ್ಗಾ ಆಡಳಿತ ಮಂಡಳಿಯಿಂದ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ (Highcourt) ಧಾರವಾಡ ಪೀಠವು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಿಸಲು ಅನುಮತಿ ನೀಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಚಿನ ಮಗದುಮ್ಮಅವರಿದ್ದ ಏಕಸದಸ್ಯ ಪೀಠವು ಅಂಜುಮನ್ ದರ್ಗಾ (Anjuman Dargah) ಆಡಳಿತ ಮಂಡಳಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ತಿರಸ್ಕರಿಸಿ ಈ ತೀರ್ಪು ನೀಡಿದೆ. ಈ ಮೂಲಕ ಎರಡನೆ ವರ್ಷವು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ಸಿಕ್ಕಿದೆ.

ಇನ್ನು ಇದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi), ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ,ಮಾಜಿ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಅನೇಕ ಬಿಜೆಪಿ (BJP) ನಾಯಕರು ಕಳೆದ ಎರಡು ದಿನದಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದರು.
ಈ ಕುರಿತು ಮಾತನಾಡಿರುವ ಶಾಸಕ ಅರವಿಂದ್ ಬೆಲ್ಲದ್ (Aravind Bellad) ಅವರು, ಈದ್ಗಾ ಮೈದಾನ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಸ್ತಿಯಾಗಿದ್ದು, ಪಾಲಿಕೆಯೇ ಇದರ ಮಾಲೀಕರು ಎಂದು ಹೈಕೋರ್ಟ್ ಹೇಳಿದೆ. ಅರ್ಜಿಯನ್ನು ಸಲ್ಲಿಕೆ ಮಾಡಿ ವಿವಾದ ಸೃಷ್ಟಿ ಮಾಡಿದ ಅಂಜುಮನ್ ಸಂಸ್ಥೆಯವರು ಕೇವಲ ಪರವಾನಗಿ ಹೋಲ್ಡರ್ ಆಗಿದ್ದು ವರ್ಷಕ್ಕೆ 2 ಸಲಾ ನಮಾಜ್ ಮಾಡಲು ಪಾಲಿಕೆ ಅವಕಾಶ ನೀಡಿದೆ.
ಅದಕ್ಕೆ ಈದ್ಗಾ (Eidgah) ಮೈದಾನ ಮಹಾನಗರ ಪಾಲಿಕೆ ಅಡಿಯಲ್ಲಿದ್ದು ಅಂಜುಮನ್ ಸಂಸ್ಥೆಯವರಿಗೆ ನಮಾಜ್ ಮಾಡಲು ಅವಕಾಶ ಕೊಡಬಹುದು. ಅಂಜುಮನ್ ಸಂಸ್ಥೆಯವರು ಪಾಲಿಕೆ ಕೆಲಸಕ್ಕೆ ಅಡ್ಡಿಪಡಿಸಬಾರದು ಹೀಗಾಗಿ ಅಂಜುಮನ್ ಸಂಸ್ಥೆಯವರಿಗೆ ಈದ್ಗಾ ಮೈದಾನದ ಮೇಲೆ ಯಾವುದೇ ಹಕ್ಕು ಇಲ್ಲ ಎಂದು ಕೋರ್ಟ್ ಮನಗಂಡಿದೆ. ಹೀಗಾಗಿಯೇ ಅಂಜುಮನ್ ಸಂಸ್ಥೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ ಎಂದು ಅವರು ಹೇಳಿದ್ದಾರೆ.