ಮಳೆಯಲ್ಲೇ ನಡೆದು ಆಸ್ಪತ್ರೆ ಸೇರಿದ ತುಂಬು ಗರ್ಭಿಣಿ

ಹೆಚ್ ಡಿ ಕೋಟೆ, ನ 8 : ಮಳೆಯನ್ನೂ ಲೆಕ್ಕಿಸದೆ ಹೆರಿಗೆ ನೋವು ಸಹಿಸಿಕೊಂಡು ಕಾಡು ದಾರಿಯಲ್ಲಿ ಕ್ರೂರಮೃಗಗಳ ಕಾಟ ಲೆಕ್ಕಿಸದೇ ಮಳೆಯ ರಕ್ಷಣೆಗೆ ಕೊಡೆಯ ಆಶ್ರಯದೊಂದಿಗೆ ರಂಜಿತಾ ಎಂಬ ತುಂಬು ಗರ್ಭಿಣಿಯೊಬ್ಬರು 1ಕಿಮೀ ನಡೆದು ಆಸ್ಪತ್ರೆ ಸೇರಿರುವ ಘಟನೆ  ಎಚ್.ಡಿ.ಕೋಟೆ ತಾಲ್ಲೂಕಿನ ಬೊಮ್ಮಲಾಪುರ ಹಾಡಿಯಲ್ಲಿ ನಡೆದಿದೆ

ಹೆಚ್ ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ವನ್ಯಜೀವಿ ಅರಣ್ಯದಲ್ಲಿರುವ ಬೊಮ್ಮಲಾಪುರ ಹಾಡಿ ರಸ್ತೆ ಸಂಪರ್ಕಕ್ಕೆ ಅರಣ್ಯ ಇಲಾಖೆ ತಡೆಹಾಕಿದ್ದು ಹೀಗಾಗಿ ಬೊಮ್ಮಲಾಪುರ ಹಾಡಿಗೆ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆಯಲ್ಲಿ ಮಹಿಳೆ ನಡೆದುಕೊಂಡೇ ಆಸ್ಪತ್ರೆಗೆ ಸೇರಬೇಕಾಯಿತು.

ರಸ್ತೆ ಸಂಪರ್ಕ ಇಲ್ಲದ ಹಿನ್ನಲೆಯಲ್ಲಿ ಇಂದಿಗೂ ಹಾಡಿಯ ಮಂದಿ ಕಾಲುನಡಿಗೆಯಲ್ಲೇ ಕಾಡಿನ ಹಾದಿಯಲ್ಲಿ ಕ್ರೂರ ಮೃಗಗಳ ಕಾಟದ ನಡುವೆಯೂ ಜೀವದ ಹಂಗು ತೊರೆದು ಸಂಚರಿಸಬೇಕಾದ ಸ್ಥಿತಿಯಿದೆ

ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಾಗ ಆಶಾ ಕಾರ್ಯಕರ್ತೆ ಹಾಗೂ ಹಾಡಿಯ ಮಂದಿ ಸಹಕಾರದಿಂದ ಮಳೆಯಲ್ಲೂ ಕೊಡೆಯ ಆಶ್ರಯದೊಂದಿಗೆ ಒಂದು ಕೀ.ಮಿ ನಡೆದು ಬಂದಿದ್ದಾರೆ ನಂತರ ಆ್ಯಂಬುಲೆನ್ಸ್  ಮುಖೇನ  ಎಚ್.ಡಿ.ಕೋಟೆ ಸರಗೂರು ತಾಲ್ಲೂಕಿನ ವಿವೆಕಾನಂದ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಇದೀಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಯಾವುದೋ ತುರ್ತು ಪರಿಸ್ಥಿಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ಇದ್ದು ಈ ಬಗ್ಗೆ ಸಂಬಂಧ ಪಟ್ಟವರು ಹಾಡಿಗಳ ಆದಿವಾಸಿಗರ ಸ್ಥಿತಿಗತಿ ಅರಿತು ಕನಿಷ್ಠ ಪಕ್ಷ ರಸ್ತೆ, ವಿದ್ಯುತ್  ದೀಪ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸ ಬೇಕೆಂಬುವುದು ಹಾಡಿಯವರ ಒತ್ತಾಯವಾಗಿದೆ

Exit mobile version