ಬಿಟ್ ಕಾಯಿನ್ ಪ್ರಕರಣವನ್ನು ಮುಚ್ಚಿಹಾಕಲು ರಾಷ್ಟ್ರೀಯ ಪಕ್ಷಗಳಿಂದ ಪ್ರಯತ್ನ – ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು ನ 11 : ಬಿಟ್ ಕಾಯಿನ್ ಪ್ರಕರಣವನ್ನು ಮುಚ್ಚಿಹಾಕಲು ರಾಷ್ಟ್ರೀಯ ಪಕ್ಷಗಳಿಂದ ಬಿರುಸಿನ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಯುತ್ತಿರುವ  ಜನತಾ ಪರ್ವದ ಎರಡನೇ ಹಂತದ ಸಂಘಟನಾ ಕಾರ್ಯಗಾರ ಜನತಾ ಸಂಗಮದ ಮೂರನೇ ದಿನ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಆ ಮೂಲಕ ಇಡೀ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿವೆ ಎಂದರು . ಕೆಲ ದಿನಗಳಿಂದ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ದಿಲ್ಲಿಯಲ್ಲಿ ರಫೆಲ್ ಯುದ್ಧ ವಿಮಾನಗಳ ಖರೀದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡೂ ಪಕ್ಷಗಳ ಕೆಸರೆರಚಾಟದಲ್ಲಿ ನಿರತವಾಗಿವೆ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.

ಬಿಟ್ ಕಾಯಿನ್ ಹಗರಣ ಬಗ್ಗೆ ಗಂಭೀರ ನಿಲುವು ತಾಳಬೇಕು. ಸರಕಾರ ಪ್ರಾರಂಭಿಕ ಹಂತದಲ್ಲಿ ಪ್ರಚಾರಕ್ಕೆ ಮಾತ್ರ ಚರ್ಚೆ ಮಾಡಿ ನಂತರ ನಿರ್ಲಕ್ಷ್ಯ ಮಾಡುವುದು  ಬೇಡ. 2016-17ರಿಂದಲೂ ಈ ಹಗರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಆಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗಲೇ ಅವರು ಕಠಿಣವಾಗಿ ವರ್ತಿಸಿ ಪ್ರಾರಂಭಿಕ ಹಂತದಲ್ಲೇ ಕ್ರಮ ತೆಗೆದುಕೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ  ದಂಧೆ ನಡೆಯುತ್ತಿರಲಿಲ್ಲ ಎಂದು ಹೆಚ್.ಡಿಕೆ ಅಭಿಪ್ರಾಯಪಟ್ಟರು.

Exit mobile version