ಕರಾವಳಿ ಕೆರಳಿದೆ, ಕರ್ನಾಟಕ ಕೆರಳುವುದು ಬಾಕಿ ಇದೆ : ಹೆಚ್.ಡಿಕೆ

bjp

ಬಿಜೆಪಿಯ(BJP) ಮತಕ್ಕಾಗಿ ಮರಣ ಮೃದಂಗದ ಆಳ-ಅಗಲ ಈಗ ಜನರಿಗೂ ಅರ್ಥವಾಗುತ್ತಿದೆ. ಬಿಜೆಪಿ ಅಧ್ಯಕ್ಷರು ಸೇರಿ ಸಚಿವರಿಬ್ಬರಿಗೆ ಎದುರಾದ ಪ್ರತಿರೋಧವೇ ಜನರ ತಾಳ್ಮೆ ಕಟ್ಟೆಯೊಡೆದಿದೆ ಎನ್ನುವುದಕ್ಕೆ ಸಾಕ್ಷಿ. ಕರಾವಳಿ ಕೆರಳಿದೆ. ಕರ್ನಾಟಕ(Karnataka) ಕೆರಳುವುದು ಬಾಕಿ ಇದೆ ಎಂದು ಜೆಡಿಎಸ್‌ ನಾಯಕ(JDS Leader) ಹೆಚ್.ಡಿ ಕುಮಾರಸ್ವಾಮಿ(HD Kumarswamy) ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್‌(Tweet), ಮಾಡಿರುವ ಅವರು, ಸತ್ತ ಸರಕಾರದ ಸಾಹುಕಾರನಿಗೆ ಸಂಭ್ರಮದ ಚಿಂತೆ, ಆಗದ ಸಾಧನೆ ಹೇಳಿಕೊಳ್ಳುವ ಅನಿವಾರ್ಯತೆ.

ಇನ್ನಾದರೂ ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ `ನರಹಂತಕ ರಾಜಕಾರಣʼ ನಿಲ್ಲಲಿ. ನಡುರಸ್ತೆಯಲ್ಲಿ ಹರಿದ ಪ್ರವೀಣ್ ನೆಟ್ಟಾರು(Praveen Nettar) ನೆತ್ತರು, ನಾಡಿನ ಆತ್ಮಸಾಕ್ಷಿಯನ್ನು ಕಲಕಿದೆ. ಒಂದೇ ಊರಿನಲ್ಲಿ ಎಂಟೇ ದಿನದಲ್ಲಿ 2 ಕೊಲೆ ನಡೆದಿವೆ ಎಂದರೆ ಈ ಸರಕಾರ ಬದುಕಿದೆಯಾ? ಸತ್ತಿದೆಯಾ? ಏನು ಸಾಧನೆ ಅಂತ ಸರಕಾರ ಜನರಿಗೆ ಹೇಳುತ್ತದೆ? 40% ಕಮಿಷನ್, ಕೋವಿಡ್ ಹೆಸರಿನಲ್ಲಿ ಕೊಳ್ಳೆ, ಅಧಿಕಾರಿಗಳ ವರ್ಗದಲ್ಲಿ ಪೇಮೆಂಟ್ ಕೋಟಾ, ಪಿಎಸ್ಐ ನೇಮಕದಲ್ಲಿ ಕಾಸಿನಾಟ, ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲೂ ನೋಟಿನಾಟ.

ಜೇಬು ತುಂಬಿಸಿಕೊಳ್ಳುವ ಧನದಾಟ ಬಿಟ್ಟರೆ, ಜನರಿಗೆ ಸರಕಾರ ಮಾಡಿದ್ದೇನು? ತಾಯಂದಿರ ಆರ್ತನಾದ ಸರಕಾರದ ಕಿವಿಗೆ ಇಂಪಾದ ನಾದʼದಂತೆ ಕೇಳುತ್ತಿವೆಯಾ? ಎಂದು ಪ್ರಶ್ನಿಸಿದ್ದಾರೆ. ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು? ಮತ್ತೆಷ್ಟು ಹೆತ್ತ ಕರುಳುಗಳು ಕಣ್ಣೀರಿಡಬೇಕು? ಹರ್ಷ, ಚಂದ್ರು ತಾಯಂದಿರ ಆರ್ತನಾದ ಸರಕಾರಕ್ಕೆ ಕೇಳಿಸಿದ್ದಿದ್ದರೆ ಪ್ರವೀಣ್ ನೆಟ್ಟಾರು ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ? ಕೊಲೆಯನ್ನೇ ತಡೆಯಲಾಗದೇ ಈಗ `ಕೃತಕ ಸಾಂತ್ವನʼ ಹೇಳಿದರೇನು ಪ್ರಯೋಜನ? ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ?

ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ ಮತಕ್ಕಾಗಿ ಕೋಮುಗಳ ಇರಿಯುವುದಾ ಸಾಧನೆ? ಸಾಧನೆ ನೆಪದಲ್ಲಿ ನಲಿಯುವ ಮುನ್ನ ಕನಿಷ್ಠ ನಾಚುವ ಸೂಕ್ಷ್ಮತೆಯೂ ಇಲ್ಲವಲ್ಲ ಎಂದು ಟೀಕಿಸಿದ್ದಾರೆ. ಸರಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ಸಾವಿನಲ್ಲೂ ಸಿಂಪಥಿ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರಕಾರದ(BJP Govt) ವರ್ಷದ ಸಾಧನೆ. ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ.

ಪಾಪ.. ರಾಜ್ಯ ಬಿಜೆಪಿ ಸರಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ. `ಸಾವುಗಳನ್ನೇ ಸಾಧನೆʼಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನ, ಸರಕಾರ ಮುಖ ಉಳಿಸಿಕೊಂಡಿದೆ ಎಂದಿದ್ದಾರೆ.

Exit mobile version