ಸಕ್ಕರೆನಾಡು ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಬಹುತೇಕ ಫಿಕ್ಸ್..!

Mandya: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Election) ಮೈತ್ರಿ ಅಭ್ಯರ್ಥಿಯಾಗಿ ಸಕ್ಕರೆನಾಡು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ಅವರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದ್ದು, ಮಂಡ್ಯದಿಂದ ಕುಮಾರಸ್ವಾಮಿ ಅವರು ಸ್ಪರ್ಧಿಸುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.

ಬೆಂಗಳೂರಿನಲ್ಲಿ (Bengaluru) ನಡೆದ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆದಿದ್ದು, ಹೆಚ್.ಡಿ.ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬೇಕೆಂದು ಅನೇಕ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಜಿ.ಟಿ.ದೇವೇಗೌಡ ಸೇರಿದಂತೆ ಸಭೆಯಲ್ಲಿದ್ದ ಎಲ್ಲಾ ನಾಯಕರು ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿ (BJP) ಹೈಕಮಾಂಡ್ನಿಂದಲೂ ಹೆಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಗೆ ಸಮ್ಮತಿ ಸಿಕ್ಕಿದೆ.

ಹೀಗಾಗಿ ಮಾರ್ಚ್ (March) 25ಕ್ಕೆ ಕುಮಾರಸ್ವಾಮಿ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾಗುವ ಸಾಧ್ಯತೆಯಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೀವೇ ಕಣಕ್ಕೆ ಇಳಿಯಬೇಕು ಇಲ್ಲದಿದ್ದರೆ ನಿಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಯಬೇಕು ಎಂದು ಕುಮಾರಸ್ವಾಮಿ ಅವರಿಗೆ ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ಒತ್ತಡ ಹಾಕಿದ್ದರು. ಹೀಗಾಗಿ ಅಂತಿಮವಾಗಿ ಕುಮಾರಸ್ವಾಮಿ ಅವರೇ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ.

ಮಾರ್ಚ್ 21ರ ನಂತರ ಘೋಷಣೆ ಸಾಧ್ಯತೆ: ಆರೋಗ್ಯ ಸಮಸ್ಯೆ ನಿಮಿತ್ತ ಕುಮಾರಸ್ವಾಮಿ ಅವರು ಚೆನ್ನೈಗೆ ತೆರಳಲಿದ್ದು ಮಾರ್ಚ್ 21 ರಂದು ಚಿಕಿತ್ಸೆಗೆ ಒಳಗಾಗಲಿದ್ದಾರೆ. ಚಿಕಿತ್ಸೆಯ ಬಳಿಕ ಮಂಡ್ಯದಲ್ಲಿ ಬೃಹತ್ ಸಭೆ ನಡೆಸಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಹೆಚ್ಡಿಕೆ ಧುಮುಕಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಕಾಂಗ್ರೆಸ್ (Congress) ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಅವರ ಹೆಸರು ಘೋಷಣೆಯಾಗಿದೆ.

ಕುಮಾರಸ್ವಾಮಿ ಅವರು ಅಭ್ಯರ್ಥಿಯಾದ ನಂತರ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡುವ ಸಾಧ್ಯತೆಯಿದೆ. ಹಾಲಿ ಸಚಿವ ಚೆಲುವರಾಯಸ್ವಾಮಿ (Cheluvarayaswamy) ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆದರೆ ಸಚಿವ ಚೆಲುವರಾಯಸ್ವಾಮಿ ಲೋಕಸಭೆಗೆ ಸ್ಪರ್ಧೆ ಮಾಡುವ ಉತ್ಸಾಹ ತೋರುತ್ತಿಲ್ಲ.

Exit mobile version