ರಾಜ್ಯಸಭಾ ಚುನಾವಣೆ : ಹೊಸತಂತ್ರ ಹೆಣೆದ ಎಚ್‍ಡಿಕೆ!

ರಾಜ್ಯಸಭಾ ಚುನಾವಣೆ(Rajyasabha Election) ತೀವ್ರ ಕುತೂಹಲ ಕೆರಳಿಸಿದೆ. ಮೂರು ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ದೃಷ್ಟಿಯಿಂದ ಅನೇಕ ರಣತಂತ್ರಗಳನ್ನು ಹೆಣೆಯುತ್ತಿವೆ.

ಹೀಗಾಗಿ ಮೂರು ಪಕ್ಷಗಳಿಗೂ ಅಡ್ಡ ಮತದಾನದ ಭೀತಿ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS) ಪಕ್ಷದಲ್ಲಿ ಅಡ್ಡ ಮತದಾನ ಮಾಡುವ ಶಾಸಕರ ಸಂಖ್ಯೆ ಹೆಚ್ಚು. ಹೀಗಾಗಿ ಅಡ್ಡ ಮತದಾನಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ(HD Kumarswamy) ಹೊಸ ರಣತಂತ್ರ ಹೆಣೆದಿದ್ದಾರೆ. 32 ಸದಸ್ಯರ ಬಲ ಹೊಂದಿರುವ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯರ ಬೆಂಬಲ ಅತ್ಯಗತ್ಯ. ಅದೇ ರೀತಿ ಕಾಂಗ್ರೆಸ್‍ಗೂ ಕೂಡಾ ತನ್ನ 2ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್ ಬೆಂಬಲ ಅಗತ್ಯ.

ಆದರೆ ಪ್ರತಿಷ್ಠೆಯ ಕಾರಣದಿಂದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಒಮ್ಮತ ಮೂಡುತ್ತಿಲ್ಲ. ಅನೇಕ ಬಾರಿ ಮಾತುಕತೆಗಳು ನಡೆದು ವಿಫಲವಾಗಿವೆ. ಆದರೆ ಇದೀಗ ಜೆಡಿಎಸ್ ಹೊಸ ಸೂತ್ರವೊಂದನ್ನು ಸಿದ್ದರಾಮಯ್ಯ(Siddaramaiah) ಮುಂದಿಟ್ಟಿದೆ. ಅದೆನೆಂದರೆ, ರಾಜ್ಯಸಭಾ ಚುನಾವಣೆಯಲ್ಲಿ ನಾವು ನಿಮ್ಮ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. ಆದರೆ ಸಿ.ಎಂ.ಇಬ್ರಾಹಿಂ(CM Ibrahim) ಅವರಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಚುನಾವಣೆ ನಡೆದಾಗ ನೀವು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಎಚ್‍ಡಿಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಜೆಡಿಎಸ್‍ನ ಈ ಬೇಡಿಕೆ ಕುರಿತು ಕಾಂಗ್ರೆಸ್‍ನಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನು ಅಡ್ಡ ಮತದಾನ ಆಗುವ ಭೀತಿಯಿಂದ ಕುಮಾರಸ್ವಾಮಿ ಅವರು ತಮ್ಮ ಶಾಸಕರ ಸಭೆ ನಡೆಸಿ, ರೆಸಾರ್ಟ್‍ಗೆ ವರ್ಗಾಯಿಸಿದ್ದಾರೆ. ಆದರೆ ಐದು ಮಂದಿ ಜೆಡಿಎಸ್ ಶಾಸಕರು ಸಭೆಗೆ ಗೈರಾಗಿದ್ದಾರೆ. ಜಿ.ಟಿ.ದೇವೇಗೌಡ, ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್, ಎ.ಟಿ.ರಾಮಸ್ವಾಮಿ, ಶ್ರೀನಿವಾಸ್‍ಗೌಡ ಸಭೆಗೆ ಗೈರಾಗಿದ್ದು ಇವರ ನಡೆ ನಿಗೂಢವಾಗಿವೆ. ಇನ್ನು ಈ ಐದು ಸದಸ್ಯರು ಅಡ್ಡ ಮತದಾನ ಮಾಡಿದರು ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇಲ್ಲ.

ಹೀಗಾಗಿ ಎಚ್‍ಡಿಕೆ ಈ ಶಾಸಕರಿಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಜೆಡಿಎಸ್ ಗೆಲ್ಲದಿದ್ದರೆ, ಕಾಂಗ್ರೆಸ್ ಕೂಡಾ ಗೆಲ್ಲಬಾರದು ಎಂಬ ನಿಲುವನ್ನು ಜೆಡಿಎಸ್ ತಳೆದಿದೆ ಎನ್ನಲಾಗಿದೆ.

Exit mobile version