ಬೆಳೆಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ `ಒಡಕು ಪ್ರವೃತ್ತಿ’ಯನ್ನು ಮರಾಠಿ ನಾಯಕರು ಬಿಡಬೇಕು : ಹೆಚ್.ಡಿಕೆ!

HDK

ಮಾಜಿ ಮುಖ್ಯಮಂತ್ರಿ, ಜೆಡಿಎಸ್(JDS) ನಾಯಕರಾದ ಹೆಚ್.ಡಿ ಕುಮಾರಸ್ವಾಮಿ(HD Kumarswamy) ಅವರು ಗಡಿ ವಿವಾದ ಸೃಷ್ಟಿಸಿದ ಅಜಿತ್ ಪವಾರ್(Ajith Pawar) ವಿರುದ್ಧ ಸರಣಿ ಟ್ವೀಟ್(Tweet) ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಮಹಾರಾಷ್ಟ್ರದ(Maharastra) ಉಪಮುಖ್ಯಮಂತ್ರಿಯಾದ(Deputy Chiefminister) ಅಜಿತ್ ಪವಾರ್ ಕರ್ನಾಟಕದಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದರು. ಅಜಿತ್ ಪವಾರ್ ಹೇಳಿಕೆಯ ಬೆನ್ನಲ್ಲೇ ಟ್ವೀಟ್ ಮಾಡಿದ ಹೆಚ್.ಡಿ ಕುಮಾರಸ್ವಾಮಿ, “ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತೊಮ್ಮೆ ಉದ್ಧಟತನ ಮರೆದಿದ್ದಾರೆ. ಹಿಂದೆ ; ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದ ಅವರು, ಪುನಃ ತಮ್ಮ ನಾಲಿಗೆ ಹರಿಬಿಟ್ಟಿರುವುದು ಖಂಡನೀಯ!

ಎಲ್ಲ ಭಾಷಿಕರು ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರಿದ್ದಾರೆ. ಅವರ ಒಳಿತಿನ ಬಗ್ಗೆ ಅಜಿತ್ ಪವಾರ್ ಮಾತನಾಡಲಿ. ನಮ್ಮ ರಾಜ್ಯ ಸರ್ಕಾರದ ಜತೆಯೂ ಚರ್ಚಿಸಲಿ. ಈ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡಿಗರೇ ಎನ್ನುವ ವಿಶಾಲ ಭಾವ ನಮ್ಮದು, ಇದನ್ನು ಪವಾರ್ ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ `ಒಡಕು ಪ್ರವೃತ್ತಿ'ಯನ್ನು ಮರಾಠಿ ನಾಯಕರು ಬಿಡಬೇಕು.

ಇಲ್ಲವಾದರೆ, ದೇಶದ ಉದ್ದಗಲಕ್ಕೂ ಈಗಲೂ ಬೂದಿಮುಚ್ಚಿದ ಕೆಂಡದಂತಿರುವ ಇಂಥ ಸೂಕ್ಷ್ಮ ವಿಷಯಗಳು ಮುಂಚೂಣಿಗೆ ಬಂದು ದೇಶವೇ ಛಿದ್ರವಾಗುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಂಡು, ಕೇಂದ್ರವು ಇಂಥ ಆಕ್ರಮಣಶೀಲ’ ಮನಸ್ಥಿತಿಯುಳ್ಳವರ ಕಿವಿ ಹಿಂಡಬೇಕು. 2006 ರಲ್ಲಿ ಕೇಂದ್ರದ ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ತಮ್ಮದೇ ರಾಜ್ಯದ ನಾಯಕರನ್ನು ಕೀಲಿಕೈ' ಮಾಡಿಕೊಂಡು ಇದೇ ಅಜಿತ್ ಪವಾರ್ ರಂಥ ನಾಯಕರು ನಡೆಸಿದ ಕಿತಾಪತಿ ಕಾರಣಕ್ಕೆ, ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾನು, ಅವರೆಲ್ಲರಿಗೂ ಸೆಡ್ಡು ಹೊಡೆದು ಬೆಳಗಾವಿಯಲ್ಲಿಸುವರ್ಣ ವಿಧಾನಸೌಧ’ ನಿರ್ಮಿಸುವ ಐತಿಹಾಸಿಕ ನಿರ್ಧಾರ ಕೈಗೊಂಡೆ.

ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ನಮ್ಮ ಸರ್ಕಾರದ ಬೆಂಬಲವಿದೆ ಎಂದು ಪುಣೆಯಲ್ಲಿ ಅವರಿಂದು `ಅಪರಿಪಕ್ವ’ ಹೇಳಿಕೆ ನೀಡಿದ್ದಾರೆ. ಹಾಗೆ ನೋಡಿದರೆ, ಕನ್ನಡಿಗರೇ ಹೆಚ್ಚಿರುವ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೂ ಸೇರ್ಪಡೆಯಾಗಿವೆ ಎಂಬುದನ್ನು ಪವಾರ್ ಮರೆಯಬಾರದು” ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಅಜಿತ್ ಪವಾರ್ ವಿರುದ್ಧ ಹೆಚ್‍ಡಿಕೆ ಗುಡುಗಿದ್ದಾರೆ.

Exit mobile version