ಹಲವಾರು ಔಷಧೀಯ ಗುಣಗಳ ಆಗರ ‘ರಾಗಿ’ : ರಾಗಿ ಸೇವನೆ ಯಾಕೆ ಮುಖ್ಯ ಇಲ್ಲಿದೆ ಮಾಹಿತಿ

Ragi

“ರಾಗಿ ತಿಂದವ ಯೋಗಿ” ಎನ್ನುವ ಮಾತಿನಂತೆ ರಾಗಿ(Ragi) ನಮ್ಮ ಪುರಾತನ ಆಹಾರ ಧಾನ್ಯಗಳಲ್ಲಿ(Millet) ಒಂದಾಗಿದೆ. ಅತಿ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುವ ಇದನ್ನು ಸೇವಿಸಿದರೆ ನಮ್ಮ ದೇಹವು ಸದಾಕಾಲ ಸಮೃದ್ಧತೆಯಿಂದ ಕೂಡಿರುತ್ತದೆ. ‘ರಾಗಿ ತಿಂದರೆ ರೋಗವಿಲ್ಲ’ ಎನ್ನುವ ಗಾದೆ ಮಾತಿನಂತೆ, ಬೇಸಿಗೆಯಲ್ಲಿ ರಾಗಿ ಅಂಬಲಿ ಮಾಡಿ ಕುಡಿದರೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ರಾಗಿ ಎನ್ನುವ ಪುಟ್ಟ ಧಾನ್ಯ, ಅಮೈನೋ ಆಮ್ಲಗಳು ಮತ್ತು ವಿಟಮಿನ್ ಡಿ ಯಿಂದ ಸಮೃದ್ಧವಾಗಿದೆ.

ಈ ಕಾರಣದಿಂದಾಗಿ, ರಾಗಿ ಸೇವಿಸುವ ಮೂಲಕ ಚರ್ಮವು ಯಾವಾಗಲೂ ಹೊಳಪಾಗಿ ಕಾಣುತ್ತದೆ ಮತ್ತು ಇದು ಚರ್ಮದ ಅಂಗಾಂಶಗಳನ್ನು ಸರಿಪಡಿಸುವುದರಿಂದ ಚರ್ಮದ ಸುಕ್ಕನ್ನು ಮುಂದೂಡುತ್ತದೆ. ರಾಗಿಯಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಕ್ಯಾಲ್ಸಿಯಂ ಮೂಳೆಗಳಿಗೆ ಹೆಚ್ಚು ಬಲವನ್ನು ತಂದುಕೊಡುತ್ತದೆ. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ಹಾಗೂ ವೃದ್ಧರಿಗೆ ರಾಗಿ ಬಹಳ ಉಪಯುಕ್ತವಾಗಿದೆ. ರಕ್ತಹೀನತೆಯನ್ನು ತಡೆಯುತ್ತದೆ, ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆಯು ಬಹಳ ಅಪಾಯಕಾರಿ ಹಾಗೂ ಕೆಲವೊಮ್ಮೆ ಮಾರಣಾಂತಿಕವೂ ಆಗಬಹುದು.

ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಹೃದಯದ ಆರೋಗ್ಯ ಕಾಪಾಡುತ್ತದೆ : ಇದರಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ಇದು ತಗ್ಗಿಸುತ್ತದೆ.
ಕ್ಯಾನ್ಸರ್‌ನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ : ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ಕಡಿಮೆಗೊಳಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿರುವುದರಿಂದ ರಾಗಿಯಲ್ಲಿರುವ ಫೈಬರ್ ಅಂಶವು 30% ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ. ವಿಷ ಆಮ್ಲವನ್ನು ತೆಗೆದುಹಾಕುತ್ತದೆ : ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದರಿಂದ ದೇಹವು ಆರೋಗ್ಯಯುತವಾಗಿರುತ್ತದೆ.


ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ : ಕಡಿಮೆ ಫೈಬರ್‌ಯುಕ್ತ ಆಹಾರದ ಸೇವನೆಯಿಂದಾಗಿ ಅತಿಸಾರ, ಮಲಬದ್ಧತೆ, ಗ್ಯಾಸ್ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳುಂಟಾಗುತ್ತವೆ. ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಾಗವಾಗಿಸುವಲ್ಲಿ ನೆರವಾಗುತ್ತದೆ.

Exit mobile version