ಮಧುಮೇಹದ ಬಗ್ಗೆ ನಿಮಗೆ ಗೊತ್ತಿಲ್ಲದ ಭಯಾನಕ ವಿಷಯ ಇಲ್ಲಿದೆ ನೋಡಿ!

health

ಇಂದಿನ ನವ ಯುಗದಲ್ಲಿ ಹಲವು ಜನರಲ್ಲಿ ಮಧುಮೇಹ ಕಾಣುತ್ತಿದೆ. ನಾವು ಬಳಸುವ ಆಹಾರ, ನಮ್ಮ ಜೀವನ ಶೈಲಿ ಇವೆಲ್ಲವೂ ಕೂಡ ಮಧುಮೇಹಕ್ಕೆ ಕಾರಣವಾಗುತ್ತದೆ. ಹಾಗಾದ್ರೆ ಮಧುಮೇಹ ಅಂದರೆ ಏನು ಎಂದು ನೋಡುವುದಾದರೆ, ರಕ್ತದೊಳಗಿನ ಗ್ಲುಕೋಸ್ ಅಂಶ ಇನ್ಸುಲಿನ್ ಎಂಬ ರಸದೂತದ (hormone) ನೆರವಿನಿಂದ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುತ್ತದೆ. ಇನ್ಸುಲಿನ್ ಜಠರದ ಅಡಿಭಾಗದಲ್ಲಿರುವ ಮೇದೋಜೀರಕ (pancreas) ಗ್ರಂಥಿಯಿಂದ ಸ್ರವಿಸಲ್ಪಡುತ್ತದೆ. ಅಳಿಲಿನ ಬಾಲದ ಆಕಾರದಲ್ಲಿರುವ ಈ ಮೇದೋಜೀರಕ ಗ್ರಂಥಿಯ ತುದಿಯ ಭಾಗಗಲ್ಲಿ ಇರುವ ಬೀಟಾ-ಕೋಶಗಳೆಂಬ (beta-cells) ವಿಶಿಷ್ಟ ಕೋಶಗಳಿಂದ ಇನ್ಸುಲಿನ್ ರಸದೂತ ಬಿಡುಗಡೆಯಾಗಿ ನೇರವಾಗಿ ರಕ್ತವನ್ನು ಸೇರುತ್ತದೆ.

ಒಂದು ವೇಳೆ ಶರೀರದಲ್ಲಿ ಇನ್ಸುಲಿನ್ ಕೊರತೆಯಾದರೆ, ರಕ್ತದೊಳಗಿನ ಗ್ಲುಕೋಸ್ ಅಂಶ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುವುದು ಕಡಿಮೆಯಾಗುತ್ತದೆ. ಆಗ ಜೀವಕೋಶಗಳಿಗೆ ಶಕ್ತಿಯ ಸಂಚಯ ಕಡಿಮೆಯಾಗಿ, ಅವು ಕಾರ್ಯವಿಮುಖವಾಗಿ, ಕಡೆಗೆ ನಶಿಸುತ್ತವೆ. ಹೀಗೆ ಇನ್ಸುಲಿನ್ ಕೊರತೆ ಉಂಟಾಗುವ ಶರೀರದ ಅವ್ಯವಸ್ಥೆಯೇ ಮಧುಮೇಹ (diabetes mellitus).ಆಗಿದೆ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಸಂಖ್ಯೆಯಲ್ಲಿ ಅಥವಾ ಕಾರ್ಯದಕ್ಷತೆಯಲ್ಲಿ ಕೊರತೆಯಾದರೆ, ಆಗ ಇನ್ಸುಲಿನ್ ಸ್ರವಿಸುವ ಪ್ರಮಾಣ ಕಡಿಮೆ ಆಗುತ್ತದೆ. ಇದನ್ನು ಎರಡನೇ ಮಾದರಿಯ ಮಧುಮೇಹ ಎನ್ನಬಹುದು. ಆಹಾರದಲ್ಲಿನ ಸಕ್ಕರೆಯ ಅಂಶವನ್ನು ಕರುಳಿನ ಲೋಳೆಪದರದ ಕೋಶಗಳು ಹೀರುತ್ತಲೇ ಇರುವುದರಿಂದ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ.

ಹೀಗಿದ್ದರೂ ಇನ್ಸುಲಿನ್ ಕೊರತೆಯ ಕಾರಣದಿಂದ ಆ ಗ್ಲುಕೋಸ್ ಅಂಗಾಂಗಗಳ ಜೀವಕೋಶಗಳಿಗೆ ತಲುಪುವುದಿಲ್ಲ. ಈ ಜೀವಕೋಶಗಳು “ನಾವು ಕೆಲಸ ಮಾಡಲು ನಮ್ಮಲ್ಲಿ ಗ್ಲುಕೋಸ್ ದಾಸ್ತಾನು ಇಲ್ಲ” ಎಂದು ಮೆದುಳಿಗೆ ಸಂದೇಶ ರವಾನಿಸುತ್ತವೆ. ಮೆದುಳು ಇದನ್ನು “ಜೀವಕೋಶಗಳಲ್ಲಿ ಗ್ಲುಕೋಸ್ ಇಲ್ಲ ಎಂದರೆ ಶರೀರಕ್ಕೆ ಆಹಾರದ ಅವಶ್ಯಕತೆ ಇದೆ” ಎಂದು ಅರ್ಥೈಸುತ್ತದೆ. ಹೊಟ್ಟೆಗೆ ಹಸಿವಿನ ಸಂಕೇತಗಳನ್ನು ರವಾನಿಸುತ್ತದೆ. ಹೀಗಾಗಿ ಮಧುಮೇಹದ ರೋಗಿಗಳಿಗೆ ಹಸಿವು ಹೆಚ್ಚು, ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರಬೇಕು ಎಂಬ ಬಯಕೆ. ಹೀಗೆ ಹೆಚ್ಚಾಗಿ ತಿನ್ನುತ್ತಲೇ ಇರುವುದರಿಂದ ಹೆಚ್ಚು ಹೆಚ್ಚು ಗ್ಲುಕೋಸ್ ರಕ್ತವನ್ನು ಸೇರುತ್ತಲೇ ಇರುತ್ತದೆ.

ಇದೊಂದು ವಿಷಮ ಆವರ್ತನ ಚಕ್ರ (vicious cycle). ಹೀಗೆ ರಕ್ತಕ್ಕೆ ಸೇರಿದ ಗ್ಲುಕೋಸ್ ನ ಅಧಿಕತರ ಅಂಶ ಜೀವಕೋಶಗಳ ಒಳಗೆ ಹೋಗಲು ಸಾಧ್ಯವಾಗದೆ ರಕ್ತದಲ್ಲೇ ಉಳಿದುಬಿಡುತ್ತದೆ. ರಕ್ತದಲ್ಲಿ ಗ್ಲುಕೋಸ್ ಅಂಶದ ಪ್ರಮಾಣವನ್ನು ಪರೀಕ್ಷಿಸಿದಾಗ ಅದು ಸಾಮಾನ್ಯಕ್ಕಿಂತ ಅಧಿಕವಾಗಿರುತ್ತದೆ. ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಒಂದು ಮೇಲ್ಮಿತಿಗಿಂತ ಹೆಚ್ಚಾಗಿ ಏರಿದಾಗ ಕಡೆಗೆ ಮೂತ್ರಪಿಂಡಗಳು (kidney) ಆ ಅಧಿಕ ಗ್ಲುಕೋಸ್ ಅಂಶವನ್ನು ಸೋಸಿ ಮೂತ್ರದಲ್ಲಿ ಹೊರಹಾಕುತ್ತವೆ. ಆ ಹಂತದಲ್ಲಿ ಮೂತ್ರವನ್ನು ಪರೀಕ್ಷಿಸಿದರೆ ಅದರಲ್ಲಿ ಗ್ಲುಕೋಸ್ ಅಂಶ ಪತ್ತೆಯಾಗುತ್ತದೆ. ಹೀಗೆ ಮೂತ್ರದಲ್ಲಿ ಹೊರಹೋಗುವ ಗ್ಲುಕೋಸ್ ತನ್ನೊಂದಿಗೆ ಸಾಕಷ್ಟು ಪ್ರಮಾಣದ ನೀರನ್ನೂ ಜೊತೆಗೆ ಒಯ್ಯುತ್ತದೆ. ಈ ಕಾರಣಕ್ಕೇ ಮಧುಮೇಹ ರೋಗಿಗಳಲ್ಲಿ ಅತಿಮೂತ್ರ ಸಮಸ್ಯೆ ಕಾಡುತ್ತದೆ. ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗಿ ದಾಹ ಹೆಚ್ಚುತ್ತದೆ. ಸಾಕಷ್ಟು ನೀರು ಕುಡಿಯಲು ಸಿಗದೇ ಹೋದರೆ ಅಥವಾ ನೀರು ಸೇವನೆ ತಡವಾದರೆ ಶರೀರ ನಿತ್ರಾಣವಾಗುತ್ತದೆ. ಸುಸ್ತು, ತಲೆಸುತ್ತು, ಬವಳಿಕೆ ಕಾಡುತ್ತವೆ.


ಶರೀರದ ಕ್ರಿಯೆಗಳಿಗೆ ಅವಶ್ಯಕವಾದಷ್ಟು ಪ್ರಮಾಣದ ಇನ್ಸುಲಿನ್ ದೊರಕದೇ ಹೋದಾಗ ಮೇದೋಜೀರಕ ಗ್ರಂಥಿಯ ಅಳಿದುಳಿದ ಬೀಟಾ ಕೋಶಗಳಿಂದ ಇನ್ಸುಲಿನ್ ಸ್ರವಿಕೆಯ ಪ್ರಮಾಣವನ್ನು ಹೆಚ್ಚಿಸಬಲ್ಲ ಔಷಧಗಳನ್ನು ಸೇವಿಸಿ ಶರೀರದ ಇನ್ಸುಲಿನ್ ಕೊರತೆಯನ್ನು ನೀಗಬೇಕಾಗುತ್ತದೆ. ಅಂದರೆ, ಮೇದೋಜೀರಕ ಗ್ರಂಥಿಯಲ್ಲಿ ಬೀಟಾ ಕೋಶಗಳ ಸಂಖ್ಯೆ ಕಡಿಮೆ ಇದ್ದರೂ ಈ ಔಷಧಗಳು ಇಂತಹ ಪ್ರತಿಯೊಂದು ಬೀಟಾ ಕೋಶವೂ ಹೆಚ್ಚಿಗೆ ಕೆಲಸ ಮಾಡುವಂತೆ ಪ್ರಚೋದಿಸಿ ಒಟ್ಟಾರೆ ಇನ್ಸುಲಿನ್ ಸ್ರವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಹೀಗಾಗಿ, ಇಂತಹ ಔಷಧಗಳು ಕೆಲಸ ಮಾಡಬೇಕೆಂದರೆ ಒಂದು ಕನಿಷ್ಠ ಸಂಖ್ಯೆಯ ಬೀಟಾ ಕೋಶಗಳು ಉಳಿದಿರಬೇಕು; ಹಾಗೂ, ಆ ಬೀಟಾ ಕೋಶಗಳು ಔಷಧಗಳ ಪ್ರಭಾವದಿಂದ ಹೆಚ್ಚಿನ ಇನ್ಸುಲಿನ್ ಸ್ರವಿಸಬಲ್ಲ ಸಾಮರ್ಥ್ಯವನ್ನು ಹೊಂದಿರಬೇಕು. ಇವೆರಡರಲ್ಲಿ ಯಾವುದೇ ಒಂದು ಇಲ್ಲವಾದರೂ ಇಂತಹ ಔಷಧಗಳು ನಿರುಪಯುಕ್ತವಾಗುತ್ತವೆ.

Exit mobile version