“ಆಕ್ಷನ್ಗೆ ರಿಯಾಕ್ಷನ್ ದುರದೃಷ್ಟಕರ” ಎಂದ ಗೃಹ ಸಚಿವರು!

home minister

ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಧರ್ಮಯುದ್ದ ಇದೀಗ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪು ವಿರೋಧಿಸಿ ಕೆಲ ಮುಸ್ಲಿಂ ಸಂಘಟನೆಗಳು ಒಂದು ದಿನದ ಬಂದ್ಗೆ ಕರೆ ನೀಡಿದ್ದವು. ಆಗ ರಾಜ್ಯಾದ್ಯಂತ ಅನೇಕ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡಿದ್ದರು. ಈಗ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಹಿಂದೂ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ಎಲ್ಲೆಡೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಈಗಾಗಲೇ ಕರಾವಳಿ ಭಾಗದಲ್ಲಿ ಅನೇಕ ಹಿಂದೂಗಳ ಜಾತ್ರೆ ಮತ್ತು ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಲಾಗುತ್ತಿದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು, ಆಕ್ಷನ್ ಗೆ ರಿಯಾಕ್ಷನ್ ಎಂಬಂತೆ ಸಮಾಜ ನಡೆದುಕೊಳ್ಳುತ್ತಿದೆ. ಕೆಲವರು ಹಿಜಾಬ್ ತೀರ್ಪು ವಿರೋಧಿಸಿ ಬಂದ್ ಆಚರಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಕೆಲ ಹಿಂದೂ ಸಂಘಟನೆಗಳು ಹಿಂದೂಗಳ ಜಾತ್ರೆಗಳಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧ ವಿಧಿಸಿವೆ. ಈ ರೀತಿಯ ಘಟನೆಗಳು ನಮ್ಮ ಮನಸ್ಸುಗಳನ್ನು ಒಡೆಯುತ್ತವೆ. ಇದು ನಿಜಕ್ಕೂ ದುರದೃಷ್ಟಕರ. ಈ ವಿವಾದವನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಬೇಕಿದೆ ಎಂದರು.

ಇನ್ನು ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಸಂಬಂಧ ಕೆಲ ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿಯೂ ಅಭಿಯಾನ ಆರಂಭಿಸಿವೆ. ಸಂವಿಧಾನವನ್ನು ಗೌರವಿಸದವರೊಂದಿಗೆ ಹಿಂದೂಗಳು ವ್ಯಾಪಾರ ಮಾಡಬಾರದು ಎಂದು ಪ್ರಚಾರ ಮಾಡಲಾಗುತ್ತಿದೆ. ಅನೇಕ ಕಡೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೆ ಉಡುಪಿಯ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆರೀಫ್ ಮಾತನಾಡಿ, ನಾವು ಯಾವುದೇ ಬಂದ್ ಗೆ ಬೆಂಬಲ ನೀಡಿಲ್ಲ.

ನಾವು ಮೊದಲಿನಿಂದಲೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡುತ್ತಾ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ದಯವಿಟ್ಟು ನಮಗೆ ವ್ಯಾಪಾರ ಮಾಡಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಇನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸದಾ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಮತಾಂಧರಿಗೆ ಎಲ್ಲಿ ಏಟು ಕೊಡಬೇಕೋ ಅಲ್ಲಿಯೇ ಏಟು ಕೊಡಬೇಕು ಎಂದಿದ್ದಾರೆ.

Exit mobile version